"ಅವಿವೇಕಿಗಳು": ಬೆನ್ ಸ್ಟೋಕ್ಸ್ ಪಡೆ ವಿರುದ್ಧ ಜೆಫ್ರಿ ಬಾಯ್ಕಾಟ್ ಟೀಕೆ

PC: x.com/IExpressSports
ಲಂಡನ್: ನೂರು ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯವಾದ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಬೆನ್ ಸ್ಟ್ರೋಕ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟೆಲಿಗ್ರಾಫ್ ಅಂಕಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ 85 ವರ್ಷದ ಹಿರಿಯ ಕ್ರಿಕೆಟಿಗ, "ಇನ್ನೆಂದೂ ಈ ಬುದ್ಧಿಗೇಡಿ ಇಂಗ್ಲೆಂಡ್ ತಂಡವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ತಂಡದ ದೃಷ್ಟಿಕೋನವನ್ನು ಟೀಕಿಸಿದ್ದಾರೆ.
"ಯಾವುದೇ ಮಾಜಿ ಆಟಗಾರರು ತಂಡವನ್ನು ಟೀಕಿಸಿದರೆ ಅಥವಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರು ಅಪ್ರಸ್ತುತ ಅಥವಾ ನಗಣ್ಯ ಎಂದು ಪರಿಗಣಿಸಬೇಕು; ಏಕೆಂದರೆ ಟೆಸ್ಟ್ ಕ್ರಿಕೆಟ್ ಬದಲಾಗಿದ್ದು, ಇತಿಹಾಸ ಅಪ್ರಸ್ತುತ ಎನ್ನುವುದಾಗಿ ಈ ಸರಣಿಗೆ ಮುನ್ನ ಬೆನ್ ಸ್ಟೋಕ್ಸ್ ಹೇಳಿಕೆ ನೀಡಿದ್ದರು. ಅಂದರೆ ಇದರ ಸಂದೇಶ ಸರಳ, ಅವಿವೇಕಿಗಳಂತೆ ಟೆಸ್ಟ್ ಪಂದ್ಯಗಳನ್ನು ಕೈಚೆಲ್ಲುತ್ತಿದ್ದರೆ, ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದು ಅಸಾಧ್ಯ. ನೀವೆಂದೂ ಕಲಿಯುವುದಿಲ್ಲ; ಏಕೆಂದರೆ ನೀವು ಹೊರಗಿನವರ ಮಾತು ಕೇಳುವುದಿಲ್ಲ. ನಿಜವಾಗಿ ಅವರು ತಮ್ಮದೇ ಪ್ರಚಾರದಲ್ಲಿ ಮಾತ್ರ ನಂಬಿಕೆ ಇಟ್ಟಿದ್ದಾರೆ" ಎಂದು ಟೀಕಿಸಿದ್ದಾರೆ.
"ಇದು ತೀರಾ ಸರಳ. ಮೆದುಳಿಲ್ಲದ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದಾಗಿ ಇಂಗ್ಲೆಂಡ್ ಪಂದ್ಯದಲ್ಲಿ ಸೋತಿದೆ. ಕಡಿಮೆ ಸ್ಕೋರ್ ಆದ ಪಿಚ್ ನಲ್ಲಿ 40 ರನ್ ಗಳ ಮುನ್ನಡೆ ದೊಡ್ಡದು. ತಂಡದ ಸ್ವಯಂ ವಿನಾಶಕ್ಕೆ ಮುನ್ನ ಬೆನ್ ಡಕೆಟ್ ಮತ್ತು ಓಲಿ ಪೋಪ್ ಜತೆಯಾಗಿ ಉತ್ತಮ ಪ್ರದರ್ಶನ ನೀಡಿ ಒಂದು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದರು" ಎಂದು ವಿವರಿಸಿದ್ದಾರೆ.
ಬೇಝ್ ಬಾಲ್, ಕೆಟ್ಟ ನಿರ್ಣಯಗಳು, ಅತಿ ಆತ್ಮವಿಶ್ವಾಸ, ಯಾವುದೇ ಕಾರಣವಿರಲಿ ಅದು ಪಂದ್ಯ ಗೆಲ್ಲುವುದನ್ನು ಕಷ್ಟಕರವಾಗಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾದಂಥ ಅಗ್ರ ದೇಶಗಳ ವಿರುದ್ಧ ಸೋಲಲು ಇದು ದೊಡ್ಡ ಕಾರಣವಾಗುತ್ತದೆ" ಎಂದು ವಿಶ್ಲೇಷಿಸಿದ್ದಾರೆ. ಕೇವಲ 83 ಎಸೆತಗಳಲ್ಲಿ 123 ರನ್ ಗಳಿಸಿದ ಟ್ರಾವಿಸ್ ಹೆಡ್, ತಮ್ಮ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು.







