ಗುಜರಾತ್ |'ಪತಿಯ ವೀರ್ಯಾಣು ಕಡಿಮೆʼ ಇದೆ ಎಂದು ಮಹಿಳೆ ಮೇಲೆ ಮಾವ ಸೇರಿದಂತೆ ಇಬ್ಬರಿಂದ ಅತ್ಯಾಚಾರ; ಗರ್ಭಪಾತದ ಬಳಿಕ ಎಫ್ಐಆರ್

ಸಾಂದರ್ಭಿಕ ಚಿತ್ರ (Photo: PTI)
ವಡೋದರಾ : 40ರ ಹರೆಯದ ಮಹಿಳೆಯೋರ್ವರ ಮೇಲೆ ಆಕೆಯ ಮಾವ ಮತ್ತು ಅತ್ತಿಗೆಯ ಪತಿ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯ ವೀರ್ಯಾಣುಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಆರೋಪಿಸಿ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಲು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಗರ್ಭಪಾತದ ನಂತರ ಮಹಿಳೆ ನವಪುರ ಪೊಲೀಸ್ ಠಾಣೆಯಲ್ಲಿ ತನ್ನ ಮಾವ ಮತ್ತು ಮತ್ತೋರ್ವ ಸಂಬಂಧಿ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಇದಲ್ಲದೆ ನನ್ನ ಖಾಸಗಿ ಪೋಟೊಗಳನ್ನು ಬಹಿರಂಗಪಡಿಸುವುದಾಗಿ ಪತಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2024ರ ಫೆಬ್ರವರಿಯಲ್ಲಿ ನನಗೆ ವಿವಾಹವಾಗಿದೆ. ಕೆಲವು ವಾರಗಳ ನಂತರ, ಅತ್ತೆ ಮತ್ತು ಮಾವ ವಯಸ್ಸಿನ ಕಾರಣದಿಂದಾಗಿ ಗರ್ಭಿಣಿಯಾಗಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದರು. ನಂತರ ಚಿಕಿತ್ಸೆಗೆ ಸೂಚಿಸಲಾಗಿದೆ.
ವೈದ್ಯಕೀಯ ವರದಿಗಳ ಪ್ರಕಾರ, ಪತಿಯ ವೀರ್ಯಾಣುಗಳ ಸಂಖ್ಯೆ ಬಹಳ ಕಡಿಮೆಯಿದ್ದು, ಆಕೆ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿವೆ. ವೈದ್ಯರ ಸಲಹೆಯ ಮೇರೆಗೆ ಆಕೆಗೆ ಐವಿಎಫ್ ಚಿಕಿತ್ಸೆ ನೀಡಲಾಯಿತು, ಆದರೆ ಅದು ಫಲಪ್ರದವಾಗಲಿಲ್ಲ. ನಂತರ ಆಕೆ ಯಾವುದೇ ಹೆಚ್ಚಿನ ಚಿಕಿತ್ಸೆಗೆ ಒಳಗಾಗಲು ನಿರಾಕರಿಸಿ ಮಗುವನ್ನು ದತ್ತು ಪಡೆಯಲು ತೀರ್ಮಾನಿಸಿದ್ದರು, ಆದರೆ ಇದಕ್ಕೆ ಅತ್ತೆ ಮತ್ತು ಮಾವ ಒಪ್ಪಿರಲಿಲ್ಲ. ಇದಾದ ಬಳಿಕ ಒಂದು ದಿನ ಮಾವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆ ಸಹಾಯಕ್ಕಾಗಿ ಕೂಗಿದಾಗ ಕಪಾಳಮೋಕ್ಷ ಮಾಡಿದ್ದಾನೆ.
ಘಟನೆ ಬಗ್ಗೆ ಪತಿಗೆ ಹೇಳಿದಾಗ ನನಗೆ ಮಗು ಬೇಕು ಎಂದು ಹೇಳಿ, ಅತ್ಯಾಚಾರದ ಬಗ್ಗೆ ಮೌನವಾಗಿರಲು ಹೇಳಿದ್ದ. ಒಂದು ವೇಳೆ ಈ ಬಗ್ಗೆ ಬಾಯ್ಬಿಟ್ಟರೆ ನಗ್ನ ಪೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಮಾವ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದರೂ ಆಕೆ ಗರ್ಭಿಣಿಯಾಗಿಲ್ಲ. ಇದಾದ ಬಳಿಕ ಮತ್ತೋರ್ವ ಸಂಬಂಧಿಯೂ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಜೂನ್ನಲ್ಲಿ ಮಹಿಳೆ ಗರ್ಭಿಣಿಯಾದರು. ಆದರೆ ಜುಲೈನಲ್ಲಿ ಗರ್ಭಪಾತವಾಯಿತು ಎಂದು ಹೇಳಿದ್ದಾರೆ.
ಪೊಲೀಸರು ಈ ಕುರಿತು ಎಫ್ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.







