ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

ಹೊಸದಿಲ್ಲಿ, ಆ. 5: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮಂಗಳವಾರ ಹೊಸದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರು ಸುದೀರ್ಘ ಕಾಲದಿಂದ ಕಾಯಿಲೆಯಿಂದ ಬಳಲುತ್ತಿದ್ದರು.
ಸತ್ಯಪಾಲ್ ಮಲಿಕ್ರನ್ನು ಮೇ 11ರಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು.
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರು ಮಂಗಳವಾರ ಮಧ್ಯಾಹ್ನ 1:10ಕ್ಕೆ ಇಹಲೋಕ ತ್ಯಜಿಸಿದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.
ಅವರು 2018 ಆಗಸ್ಟ್ನಿಂದ 2019 ಅಕ್ಟೋಬರ್ ವರೆಗೆ ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಅವರ ಅವಧಿಯಲ್ಲಿ, 2019 ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲಾಗಿತ್ತು. ಇಂದು (ಮಂಗಳವಾರ) ಅದರ ಆರನೇ ವಾರ್ಷಿಕ ದಿನವಾಗಿದೆ.
ಅವರನ್ನು ಬಳಿಕ, ಗೋವಾದ ರಾಜ್ಯಪಾಲರಾಗಿ ನೇಮಿಸಲಾಯಿತು. ಅದರ ನಂತರ, ಅವರು 2022 ಅಕ್ಟೋಬರ್ ವರೆಗೆ ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಡಾ. ರಾಮ್ ಮನೋಹರ್ ಲೋಹಿಯಾರ ಸಮಾಜವಾದಿ ಸಿದ್ಧಾಂತಕ್ಕೆ ಆಕರ್ಷಿತರಾಗಿ ಮಲಿಕ್ 1965-66ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ವಿದ್ಯಾರ್ಥಿ ನಾಯಕರಾದ ಅವರು ಮೀರತ್ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು ಹಾಗೂ ಬಳಿಕ ಮೀರತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ವಾಹನಗಳ ಸಾಲಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಸತ್ಯಪಾಲ್ ಮಲಿಕ್ ರಾಜ್ಯದ ರಾಜ್ಯಪಾಲರಾಗಿದ್ದರು. ಆ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ಮೃತಪಟ್ಟಿದ್ದಾರೆ. ಆ ದಾಳಿಯ ಸಂದರ್ಭ ಮತ್ತು ಆ ನಂತರದ ಸಂಶಯಾಸ್ಪದವೆನ್ನಲಾದ ಘಟನಾವಳಿಗಳ ಬಗ್ಗೆ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಈ ವಿಷಯಗಳ ಬಗ್ಗೆ ಮಾತನಾಡದಂತೆ ತನಗೆ ಸೂಚಿಸಲಾಗಿತ್ತು ಎಂದು ಅವರು ಬಳಿಕ ಹೇಳಿಕೊಂಡಿದ್ದರು.
ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ಅವರು ವಿರೋಧಿಸಿದ್ದರು. ಮೇಘಾಲಯ ರಾಜ್ಯಪಾಲ ಹುದ್ದೆಯಿಂದ ಹೊರಬಂದ ಬಳಿಕ ಅವರು ಬಿಜೆಪಿಯಿಂದ ದೂರವಾಗಿದ್ದರು.







