ಮಾಜಿ ರೂಪದರ್ಶಿ ದಿವ್ಯಾ ಪಾಹುಜಾರ ಗುಂಡು ಹಾರಿಸಿ ಹತ್ಯೆ
ದಿವ್ಯಾ ಪಾಹುಜಾ | Photo: Facebook
ಚಂಡಿಗಢ: ಮಾಜಿ ರೂಪದರ್ಶಿ ದಿವ್ಯಾ ಪಾಹುಜಾ (27) ಅವರನ್ನು ಗುರುಗ್ರಾಮದ ಹೊಟೇಲೊಂದರಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಾಹುಜಾಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಒಂದು ತಿಂಗಳ ಹಿಂದೆ ಜಾಮೀನಿನಲ್ಲಿ ಹೊರಬಂದಿದ್ದ ದಿವ್ಯಾ ಪಾಹುಜಾ ಅವರನ್ನು ಐವರು ದುಷ್ಕರ್ಮಿಗಳು ಜನವರಿ 2ರಂದು ರಾತ್ರಿ ಗುರುಗ್ರಾಮದ ಹೊಟೇಲ್ ಒಂದರ ಕೊಠಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಆಕೆ ಹೊಟೇಲ್ ಮಾಲಕ ತನ್ನೊಂದಿಗಿರುವ ಅಶ್ಲೀಲ ಚಿತ್ರ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ದಿವ್ಯಾ ಪಾಹುಜಾ ಅವರ ಕುಟುಂಬ ನಿರಾಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಹೊಟೇಲ್ ಮಾಲಕ ಹಾಗೂ ಹಿಸಾರ್ನ ಅಭಿಜಿತ್ ಸಿಂಗ್ (56), ಅವರ ಇಬ್ಬರು ಕೆಲಸಗಾರರಾದ ನೇಪಾಳದ ನಿವಾಸಿ ಹೇಮರಾಜ್(28) ಹಾಗೂ ಪಶ್ಚಿಮಬಂಗಾಳದ ಜಲ್ಪಾಯಿಗುರಿಯ ನಿವಾಸಿ ಓಂಪ್ರಕಾಶ್ (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸರರು ತಿಳಿಸಿದ್ದಾರೆ.
ತನ್ನೊಂದಿಗಿನ ಅಶ್ಲೀಲ ಚಿತ್ರ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಕಾರಣಕ್ಕೆ ಹೊಟೇಲ್ ಮಾಲಕ ದಿವ್ಯ ಪಾಹುಜಾಳನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಹತ ಭೂಗತ ಪಾತಕಿ ಸಂದೀಪ್ ಗಡೋಲಿಯ ಸಹೋದರಿ ಸುದೇಶ್ ಕಟಾರಿಯಾ ಹಾಗೂ ಸಹೋದರ ಬ್ರಹ್ಮ ಪ್ರಕಾಶ್ ಕಟಾರಿಯ ಅಭಿಜಿತ್ ಸಿಂಗ್ ಗೆ ಹಣ ನೀಡಿ ದಿವ್ಯಾ ಪಾಹುಜಾಳನ್ನು ಹತ್ಯೆ ಮಾಡಿಸಿದ್ದಾರೆ ಎಂದು ದಿವ್ಯಾ ಪಹುಜಾರ ಸಹೋದರಿ ನೈನಾ ಪಹುಜಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಗುರುಗ್ರಾಮದ ಭೂಗತ ಪಾತಕಿ ಗಡೋಲಿಯನ್ನು 2016 ಫೆಬ್ರವರಿ 6ರಂದು ಗುರುಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿತ್ತು. ಅನಂತರ ಮುಂಬೈ ಪೊಲೀಸರು ಗಡೋಲಿಯನ್ನು ಆತನ ಗೆಳತಿ ದಿವ್ಯಾ ಪಾಹುಜಾರ ಮೂಲಕ ಆಮಿಷ ಒಡ್ಡಿ ಬಲೆಗೆ ಕೆಡವಲಾಯಿತು ಹಾಗೂ ನಕಲಿ ಎನ್ಕೌಂಟರ್ ನಡೆಸಿ ಕೊಲ್ಲಲಾಯಿತು ಎಂದು ಹೇಳಿದ್ದರು.