ನಿಗೂಢವಾಗಿ ಮೃತಪಟ್ಟ ಪುತ್ರ: ಪಂಜಾಬ್ ಮಾಜಿ ಸಚಿವೆ, ಮಾಜಿ ಡಿಜಿಪಿ ವಿರುದ್ಧ ಹತ್ಯೆ ಪ್ರಕರಣ ದಾಖಲು

ಮುಹಮ್ಮದ್ ಮುಸ್ತಫಾ / ಅಕಿಲ್ ಅಖ್ತರ್ / ರಝಿಯಾ ಸುಲ್ತಾನ (Photo credit: NDTV)
ಚಂಡೀಗಢ: ಅಕಿಲ್ ಅಖ್ತರ್ ನಿಗೂಢವಾಗಿ ಮೃತಪಟ್ಟ ಪ್ರಕರಣ ವಿಭಿನ್ನ ತಿರುವು ಪಡೆದುಕೊಂಡಿದೆ. ಅಕಿಲ್ ತಾಯಿ, ಪಂಜಾಬ್ ನ ಮಾಜಿ ಸಚಿವೆ ರಝಿಯಾ ಸುಲ್ತಾನ ಮತ್ತು ತಂದೆ ಮಾಜಿ ಡಿಜಿಪಿ ಮುಹಮ್ಮದ್ ಮುಸ್ತಫಾ ವಿರುದ್ಧ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕಿಲ್ ಅಖ್ತರ್ ಗುರುವಾರ ತಡರಾತ್ರಿ ಪಂಚಕುಲದ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಿತಿಮೀರಿದ ಡ್ರಗ್ಸ್ ಸೇವನೆಯಿಂದ ಅಖಿಲ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಹೇಳಿಕೊಂಡಿದೆ. ಯಾವುದೋ ಔಷಧ ಸೇವನೆಯಿಂದ ಆರೋಗ್ಯ ಸಮಸ್ಯೆಗೊಳಗಾಗಿ ಅಖಿಲ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದರು.
ಅಕಿಲ್ ಅಖ್ತರ್ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ ಅಕಿಲ್ ಪತ್ನಿ ಹಾಗೂ ಆತನ ತಂದೆ ಮಧ್ಯೆ ಅನೈತಿಕ ಸಂಬಂಧವಿತ್ತು ಎಂಬ ಆರೋಪಗಳು ಕೇಳಿ ಬಂದಿದೆ. ಅಕಿಲ್ ಈ ಹಿಂದೆ ರೆಕಾರ್ಡ್ ಮಾಡಿದ್ದ ವೀಡಿಯೊಗಳು ಈ ಪ್ರಕರಣಕ್ಕೆ ವಿಭಿನ್ನ ತಿರುವು ನೀಡಿತ್ತು.
ವೀಡಿಯೊದಲ್ಲಿ, “ನನ್ನ ತಂದೆ ಹಾಗೂ ನನ್ನ ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ. ನಾನು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದೇನೆ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ. ಅವರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ನನಗೆ ಪ್ರತಿ ದಿನ ಆತಂಕವಾಗುತ್ತಿದೆ" ಎಂದು ಅಕಿಲ್ ಹೇಳಿದ್ದರು.
"ನನ್ನ ತಾಯಿ ರಝಿಯಾ ಮತ್ತು ಸಹೋದರಿ ನನ್ನ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನನ್ನ ತಂದೆಗೆ ನನ್ನ ಮದುವೆಗೆ ಮೊದಲು ನನ್ನ ಪತ್ನಿಯ ಪರಿಚಯವಿತ್ತು ಎಂಬ ಅನುಮಾನ ನನಗಿದೆ. ಅವಳು ನನ್ನನ್ನು ಮದುವೆಯಾಗಲಿಲ್ಲ, ಅವಳು ನನ್ನ ತಂದೆಯನ್ನು ಮದುವೆಯಾದಳು. ನನ್ನ ಕುಟುಂಬದ ಸದಸ್ಯರು ನಾನು ಭ್ರಮೆಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳುತ್ತಿದ್ದರು. ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದರು. ನಾನು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ ನನ್ನನ್ನು ವೈದ್ಯರ ಬಳಿಗೆ ಕರೆದೊಯ್ಯಬೇಕಿತ್ತು. ಆದರೆ ಅವರು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳಹಿಸಿದರು" ಎಂದು ಅಕಿಲ್ ಆರೋಪಿಸಿದ್ದರು.
ಉಪ ಪೊಲೀಸ್ ಆಯುಕ್ತೆ ಸೃಷ್ಟಿ ಗುಪ್ತಾ ಅವರು ಈ ಕುರಿತು ಪ್ರತಿಕ್ರಿಯಿಸಿ, ಅಕಿಲ್ ಮೃತಪಟ್ಟ ಪ್ರಕರಣದಲ್ಲಿ ಅವರ ಕುಟುಂಬದ ಸದಸ್ಯರ ಪಾತ್ರವಿದೆ ಎಂದು ನಮಗೆ ದೂರು ಬಂದಿತ್ತು. ಅಕಿಲ್ ಅಖ್ತರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು, ಕೆಲವು ವೀಡಿಯೊಗಳು, ಪೋಟೊಗಳು ಕೂಡ ಅನುಮಾನಗಳನ್ನು ಹುಟ್ಟುಹಾಕಿವೆ. ಇದರ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಈ ಕುರಿತು ತನಿಖೆಯನ್ನು ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.







