ಕಾಂಗ್ರೆಸ್ ಹುದ್ದೆಗಳಿಗೆ ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ರಾಜೀನಾಮೆ; ಕಾರಣವೇನು?

ಹರೀಶ್ ರಾವತ್ (Photo Credit | PTI)
ಡೆಹ್ರಾಡೂನ್: ತಮ್ಮ ಆಪ್ತ ಸಹಾಯಕ ಚಂದನ್ ಸಿಂಗ್ ಜೀನಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ಶೋಧದಲ್ಲಿ 32 ಲಕ್ಷ ರೂ. ನಗದು, ಚಿನ್ನಾಭರಣ ಹಾಗೂ ದುಬಾರಿ ಕೈಗಡಿಯಾರಗಳು ಪತ್ತೆಯಾದ ಬೆನ್ನಲ್ಲೇ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಾಂಗ್ರೆಸ್ ನ ಎರಡು ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯತ್ವ ಹಾಗೂ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸದಸ್ಯತ್ವಕ್ಕೆ ರಾವತ್ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
‘ನಾನು ಯಾವುದೇ ಸರ್ಕಾರಿ ಹುದ್ದೆಯಲ್ಲಿಲ್ಲ. ಹೀಗಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಆದರೆ, ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದೇನೆ. ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸದಸ್ಯನಾಗಿದ್ದೇನೆ. ಈ ಎರಡೂ ಹುದ್ದೆಗಳಿಂದ ಅತ್ಯಂತ ವಿನಮ್ರತೆಯಿಂದ ಕೆಳಗಿಳಿಯಲು ಬಯಸುತ್ತೇನೆ. ನನ್ನಿಂದಾಗಿ ಪಕ್ಷದ ಹೋರಾಟ ದುರ್ಬಲವಾಗಬಾರದು’ ಎಂದು ರಾವತ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಏನು ವಶ?
2016ರ ವಿಪಿಡಿಒ (VPDO) ಪರೀಕ್ಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜೀನಾ ಅವರ ಆವರಣದಲ್ಲಿ ED ಶೋಧ ನಡೆಸಿತ್ತು.
ಈ ವೇಳೆ 32 ಲಕ್ಷ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ನಗದು, 13 ಚಿನ್ನದ ನಾಣ್ಯಗಳು, ಸುಮಾರು 200.5 ಗ್ರಾಂ ತೂಕದ ಏಳು ಚಿನ್ನದ ಸರಗಳು ಹಾಗೂ ದುಬಾರಿ ಬ್ರಾಂಡ್ ಗಳ 12 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಂಡಿರುವುದಾಗಿ ED ತಿಳಿಸಿದೆ.
ಜೀನಾ ಬಗ್ಗೆ ರಾವತ್ ಹೇಳಿದ್ದೇನು?
ಚಂದನ್ ಸಿಂಗ್ ಜೀನಾ ಅವರು ತಮ್ಮ ವಿಶೇಷ ಕರ್ತವ್ಯದ ಮೇಲಿನ ಅಧಿಕಾರಿ (OSD) ಆಗಿ ಕಾರ್ಯನಿರ್ವಹಿಸಿದ್ದರು ಎಂದು ರಾವತ್ ಹೇಳಿದ್ದಾರೆ. ತಾವು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಹೊಂದಿದ್ದ ಅವಧಿಯಲ್ಲಿ ಜೀನಾ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು ಎಂದೂ ತಿಳಿಸಿದ್ದಾರೆ.
‘ಜೀನಾ ಅತ್ಯಂತ ಸಭ್ಯ, ವಿನಮ್ರ ಮತ್ತು ಕಠಿಣ ಪರಿಶ್ರಮಿ ವ್ಯಕ್ತಿ’ ಎಂದು ರಾವತ್ ಬಣ್ಣಿಸಿದ್ದಾರೆ.
‘ಗ್ರಾಮ ಸೇವಕರ ನೇಮಕಾತಿಯ ಸಂದರ್ಭದಲ್ಲಿ ಜೀನಾ OMR ಹಾಳೆಗಳಲ್ಲಿ ಅಕ್ರಮ ಎಸಗಿದ್ದರೆ, ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿದ್ದರೆ, ಅಂತಹ ದುಸ್ಸಾಹಸದ ಕೃತ್ಯದ ಬಗ್ಗೆ ನನಗೆ ನಾಚಿಕೆಯಾಗುತ್ತದೆ. ಆದರೆ, ಈ ಆರೋಪವನ್ನು ನಾನು ನಂಬುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ನನ್ನ ಬದಲು ಸಹಾಯಕನ ಬಾಗಿಲು ಬಡಿದಿದ್ದಾರೆ’
ಉತ್ತರಾಖಂಡ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ ಎಂದಿರುವ ರಾವತ್, ಸಿಬಿಐ ಮತ್ತು ಚುನಾವಣೆ ಕುರಿತ ತಮ್ಮ ಹಿಂದಿನ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ.
‘ಚುನಾವಣೆ ಯಾವಾಗ ನಡೆಯುತ್ತದೆ ಎಂದು ಯಾರಾದರೂ ಕೇಳಿದಾಗಲೆಲ್ಲ, ಸಿಬಿಐ (CBI) ನನ್ನ ಬಾಗಿಲು ಬಡಿದಾಗ ಚುನಾವಣೆ ನಡೆಯುತ್ತದೆ ಎಂದು ನಾನು ತಮಾಷೆಯಾಗಿ ಹೇಳುತ್ತಿದ್ದೆ. ಅದು ಇನ್ನೂ ಬಂದಿಲ್ಲವೆಂದರೆ, ಮುಂದಿನ ವರ್ಷದ ಮಾರ್ಚ್–ಏಪ್ರಿಲ್ನಲ್ಲಿ ಚುನಾವಣೆ ನಡೆಯಲಿದೆ ಎಂದರ್ಥ’ ಎಂದು ಅವರು ಹೇಳಿದ್ದಾರೆ.
‘ಆದರೆ ಈ ಬಾರಿ ನನ್ನ ಬಾಗಿಲು ಬಡಿಯುವ ಬದಲು, ನನ್ನ ಸಹವರ್ತಿಯೊಬ್ಬರ ಬಾಗಿಲು ಬಡಿಯುವ ಮೂಲಕ ಒಂದು ಕಥನವನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ’ ಎಂದು ರಾವತ್ ಆರೋಪಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
‘ರಾಹುಲ್ ಗಾಂಧಿ ಕೂಡ ‘ಸ್ಟೂಡೆಂಟ್ಸ್ ಕಿ ಗೂಂಜ್’ (Students Ki Goonj) ಕಾರ್ಯಕ್ರಮದ ಮೂಲಕ ರಾಷ್ಟ್ರಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ’ ಎಂದು ರಾವತ್ ತಿಳಿಸಿದ್ದಾರೆ.






