ಉತ್ತರ ಪ್ರದೇಶ | ದಿಗ್ವಿಜಯ್ ಸಿಂಗ್ ಗೆ ಸೇರಿದ ಜಮೀನನ್ನೇ ಮಾರಾಟ ಮಾಡಿದ ವಂಚಕ!

Photo : PTI
ಅಯೋಧ್ಯೆ: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಗೆ ಸೇರಿದ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿನ ಜಮೀನನ್ನು ವಂಚಕನೊಬ್ಬ ಮಾರಾಟ ಮಾಡಿದ್ದಾನೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರಿಗೆ ಸೇರಿದ ಜಮೀನಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಶುಕ್ರವಾರ ಜಮೀನಿನ ಮೇಲ್ವಿಚಾರಕ ಅನಿಲ್ ಯಾದವ್ ಗಮನಕ್ಕೆ ಬಂದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ, ಅವರು ಈ ಕುರಿತು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಅಲಪುರ್ ತಾಲ್ಲೂಕಿನ ರಾಮನಗರ ಮಹುವಾರ್ ಗ್ರಾಮದಲ್ಲಿನ 0.152 ಹೆಕ್ಟೇರ್ ವಿಸ್ತೀರ್ಣದ ತುಂಡು ಜಮೀನು (ಪ್ಲಾಟ್ ಸಂಖ್ಯೆ 1335ಕೆ) ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೆಸರಲ್ಲಿ ನೋಂದಣಿಯಾಗಿದೆ. ಇದಕ್ಕೂ ಮುನ್ನ ಈ ಜಮೀನನ್ನು 1986ರಲ್ಲಿ ಮೃತಪಟ್ಟಿದ್ದ ದಿಗ್ವಿಜಯ್ ಸಿಂಗ್ ಅವರ ತಾಯಿ ಅಪರ್ಣಾ ದೇವಿ ಹೆಸರಲ್ಲಿ ನೋಂದಾಯಿಸಲಾಗಿತ್ತು. ನಂತರ, ಉತ್ತರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ದಿಗ್ವಿಜಯ್ ಸಿಂಗ್ ಅವರಿಗೆ ಮೇ 18, 2024ರಲ್ಲಿ ಆ ಜಮೀನು ನೋಂದಣಿಯಾಗಿತ್ತು ಎಂದು ಅನಿಲ್ ಯಾದವ್ ತಿಳಿಸಿದ್ದಾರೆ.
ಅಲಪುರ್ ತಾಲ್ಲೂಕಿನ ಕೇತ್ವಾಲಿ ಗ್ರಾಮದ ನಿವಾಸಿಯಾದ ರಾಮ್ ಹರಕ್ ಚೌಹಾಣ್ ಎಂಬ ವ್ಯಕ್ತಿ ನನ್ನ ಸೋಗಿನಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿಯಾಲಾಲ್ ಹಾಗೂ ರಾಮನಗರ ಮಹುವಾರ್ ನಿವಾಸಿಗಳಾದ ರಾಜ್ ಬಹದ್ದೂರ್ ಮತ್ತು ಮಾಂಗ್ಲಿ ಎಂಬುವರಿಗೆ ಈ ಜಮೀನನ್ನು 1989ರಲ್ಲಿ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಹಾಗೂ ತಾಲ್ಲೂಕು ಆಡಳಿತಕ್ಕೆ ನೀಡಿರುವ ದೂರಿನಲ್ಲಿ ಅನಿಲ್ ಯಾದವ್ ಆರೋಪಿಸಿದ್ದಾರೆ.
ಶುಕ್ರವಾರ ಖರೀದಿದಾರರ ಕುಟುಂಬದ ಸದಸ್ಯರು ಜಮೀನಿನಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.
ಸದ್ಯ ನಿರ್ಮಾಣ ಕಾಮಗಾರಿಯನ್ನು ತಡೆ ಹಿಡಿದಿರುವ ತಾಲ್ಲೂಕು ಆಡಳಿತ, ಭೂ ದಾಖಲೆಗಳ ಕುರಿತು ತನಿಖೆಗೆ ಚಾಲನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಮೀನು ಈಗಲೂ ದಿಗ್ವಿಜಯ್ ಸಿಂಗ್ ಹೆಸರಿನಲ್ಲೇ ನೋಂದಣಿಗೊಂಡಿದೆ ಎಂದು ಅಲಪುರ್ ತಾಲ್ಲೂಕು ಕಚೇರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.







