ಬರೀ ಬಾವುಟ ಹಾರಿಸುವುದು ಸ್ವಾತಂತ್ರ್ಯವಲ್ಲ : ನಟ ಕಿಶೋರ್ ಕುಮಾರ್

ನಟ ಕಿಶೋರ್ ಕುಮಾರ್
ಬೆಂಗಳೂರು: ಬರೀ ಬಾವುಟ ಹಾರಿಸುವುದು ಸ್ವಾತಂತ್ರ್ಯವಲ್ಲ, ಎದ್ದು ನಿಲ್ಲಬೇಕು, ನ್ಯಾಯಕ್ಕಾಗಿ ಧ್ವನಿ ಎತ್ತಬೇಕು ಎಂದು ನಟ ಕಿಶೋರ್ ಕುಮಾರ್ ಹೇಳಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಸ್ವ ಘೋಷಿತ ದೇವಮಾನವ ಗುರ್ಮೀತ್ ಸಿಂಗ್ ಹಾಗೂ ಹೋರಾಟಗಾರ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಫೋಟೋದೊಂದಿಗೆ ನಟ ಕಿಶೋರ್ ಪೋಸ್ಟ್ ಈ ಹೇಳಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, ಬರೀ ಬಾವುಟ ಹಾರಿಸುವುದು ಸ್ವಾತಂತ್ರ್ಯವಲ್ಲ, ಎದ್ದು ನಿಲ್ಲಬೇಕು, ನ್ಯಾಯಕ್ಕಾಗಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಲಕ್ಷಗಟ್ಟಲೇ ಹುತಾತ್ಮರ ಬಲಿದಾನ ವ್ಯರ್ಥವಾಗಬಾರದೆಂದರೆ, ಜವಾಬ್ದಾರರನ್ನು ಹೊಣೆಗಾರರನ್ನಾಗಿಸಲು ಅನ್ಯಾಯದ ವಿರುದ್ಧ ಪ್ರಶ್ನಿಸಬೇಕು ಎಂದು ಅವರು ಸ್ವಾತಂತ್ರ್ಯದ ಪರಿಕಲ್ಪನೆಯನ್ನು 79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಹರ್ಯಾಣದ ಪಂಚಕುಲದಲ್ಲಿನ ದೇರಾ ಸಚ್ಚಾಸೌಧದ ಮುಖ್ಯಸ್ಥ, ಸ್ವ ಘೋಷಿತ ದೇವಮಾನವ ಗುರುಮಿತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾಗಿ 2017ರಿಂದ ಜೈಲು ಸೇರಿದ್ದಾನೆ. ಆತನಿಗೆ 14 ಬಾರಿ ಪೆರೋಲ್ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಆತ 14 ಬಾರಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಮಾಜಿ ವಿದ್ಯಾರ್ಥಿ ನಾಯಕ ಮತ್ತು ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರನ್ನು 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ (Unlawful Activities Prevention Act) ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಕುರಿತ ವಿಚಾರಣೆ ಇನ್ನೂ ಆರಂಭವಾಗದಿದ್ದರೂ ಉಮರ್ ಖಾಲಿದ್ ಇನ್ನೂ ತಿಹಾರ್ ಕಾರಾಗೃಹದಲ್ಲೇ ಇದ್ದಾರೆ.
2020ರಲ್ಲಿ ನಾಗರಿಕತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ ನಂತರದ ದಿಲ್ಲಿ ಗಲಭೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಯೆಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿದೆ.́







