ರಫೇಲ್ ಭ್ರಷ್ಟಾಚಾರ ತನಿಖೆಯಲ್ಲಿ ಭಾರತದ ಸಹಕಾರ ಕೋರಿದ ಫ್ರೆಂಚ್ ಮ್ಯಾಜಿಸ್ಟ್ರೇಟ್: ವರದಿ

Photos: Official Twitter, Wikimedia Commons, and file.
ಹೊಸದಿಲ್ಲಿ: 36 ರಫೇಲ್ ಜೆಟ್ ಗಳ ಖರೀದಿಗೆ ಸಂಬಂಧಿಸಿದತೆ 2015-16ನೇ ಸಾಲಿನಲ್ಲಿ ನಡೆದ ಒಪ್ಪಂದದ ಬಾಗವಾಗಿ ಫ್ರಾನ್ಸ್ ನ ಡಸ್ಸಾಲ್ಟ್ ಏವಿಯೇಶನ್ ಸಂಸ್ಥೆಗೆ ಮಾಡಲಾದ ಪಾವತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿವೆಯೆಂಬ ಆರೋಪಗಳಿಗೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯು ಹೊಸ ತಿರುವನ್ನು ಪಡೆದುಕೊಂಡಿದೆ.
ರಫೆೇಲ್ ಹಗರಣದ ತನಿಖೆಗೆ ಸಹಕರಿಸುವಂತೆ ಕೋರಿ ಭಾರತ ಸರಕಾರಕ್ಕೆ ಪ್ಯಾರಿಸ್ ನ ಮ್ಯಾಜಿಸ್ಟ್ರೇಟ್ ಅವರು ಅಧಿಕೃತ ಮನವಿಯನ್ನು ಕಳುಹಿಸಿದ್ದಾರೆಂದು ಫ್ರೆಂಚ್ ಸುದ್ದಿಸಂಸ್ಥೆ ಮೆಡಿಯಾಪಾರ್ಟ್ ಮಂಗಳವಾರ ಬಹಿರಂಗಪಡಿಸಿದೆ.
2016ರಲ್ಲಿ ರಫೇಲ್ ಖರೀದಿ ಒಪ್ಪಂದಕ್ಕೆ ಸಹಿಬೀಳುವಂತೆ ಮಾಡುವ ಪ್ರಯತ್ನವಾಗಿ ಡಸಾಲ್ಟ್ ಸಂಸ್ಥೆಯು ರಹಸ್ಯವಾಗಿ ಭಾರತೀಯ ಮೂಲದ ಉದ್ಯಮ ದಲ್ಲಾಳಿ ಸುಶೇನ್ ಗುಪ್ತಾ ಅವರಿಗೆ ಹಲವಾರು ಲಕ್ಷಾಂತರ ಯುರೋಗಳನ್ನು ಪಾವತಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಧ್ಯಯನ ನಡೆಸುವಲ್ಲಿ ಮ್ಯಾಜಿಸ್ಟ್ರೇಟರು ಗಳು ಆಸಕ್ತಿ ವಹಿಸಿದ್ದಾರೆಂದು ಮೆಡಿಯಾ ಪಾರ್ಟ್ ವರದಿ ಹೇಳಿದೆ.
ಮೆಡಿಯಾಪಾರ್ಟ್ ನ ಈ ವರದಿಯನ್ನು ಖ್ಯಾತ ಸುದ್ದಿ ಜಾಲತಾಣ ‘ ದಿ ವೈರ್’ ವಿವರವಾಗಿ ಪ್ರಕಟಿಸಿದೆ.
ಆದರೆ ಈ ವರದಿಗೆ, ತಕ್ಷಣವೇ ಭಾರತ ಸರಕಾರವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಮಾನ್ಯವಾಗಿ ವಿದೇಶಿ ಅಧಿಕಾರಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳಿಗೆ ಇಂತಹ ಮನವಿಗಳನ್ನು ಸಲ್ಲಿಸುತ್ತಾರೆ. ಆನಂತರ ಅವುಗಳನ್ನು ಭಾರತದಲ್ಲಿರುವ ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಈ ಪ್ರಕರಣದಲ್ಲಿ ಪ್ಯಾರಿಸ್ ನ ಮ್ಯಾಜಿಸ್ಟ್ರೇಟರು ಗಳ ಮನವಿಯನ್ನು, ಸಿಬ್ಬಂದಿ ಹಾಗೂ ತರಬೇತಿ (ಡಿಓಪಿಟಿ) ಹಾಗೂ ವಿತ್ತ ಸಚಿವಾಲಯವು ಕೈಗೆತ್ತಿಕೊಳ್ಳಬಹುದಾಗಿದೆೆ. ಆನಂತರ ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯವು ಆ ಬಗ್ಗೆ ತನಿಖೆಯನ್ನು ನಡೆಸಬಹುದಾಗಿದೆ.
ಸುಸೇನ್ ಗುಪ್ತಾ ಅವರು ಪ್ರಸಕ್ತ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆಯನ್ನೆದುರಿಸುತ್ತಿದ್ದಾನೆ.
ಸೇನ್ಗುಪ್ತ ಕಳೆದ 15 ವರ್ಷಗಳಿಂದ ಡಸಾಲ್ಟ್ ಕಂಪೆನಿಯ ಜೊತೆ ಗಾಢವಾದ ಔದ್ಯಮಿಕ ಸಂಪರ್ಕಗಳನ್ನು ಹೊಂದಿದ್ದಾನೆಂಬುದನ್ನು ಮೆಡಿಯಾ ಪಾರ್ಟ್ ವರದಿ ಮಾಡಿದೆ. ಸುಸೇನ್ ಗುಪ್ತಾಗೆ ಹಲವಾರು ದಶಲಕ್ಷ ಯುರೋ ವೌಲ್ಯದ ರಹಸ್ಯ ಕಮೀಶನ್ ಗಳನ್ನು ಕೃತ್ರಿಮ ಇನ್ವಾಯ್ಸಿಗಳ ಮೂಲಕ ಪಾವತಿಸಿದೆ ಎಂದು ವರದಿ ಹೇಳಿದೆ. ಸಾಫ್ಟ್ವೇರ್ ಕನ್ಸಲ್ಟಿಂಗ್ ಗಾಗಿ ಈ ಕಮೀಶನ್ ನೀಡಲಾಗಿದೆ ಎಂಬ ಲೆಕ್ಕವನ್ನು ತೋರಿಸಲಾಗಿದೆ ಎಂದು ವರದಿ ಹೇಳಿದೆ.
ಅಂಬಾನಿಗೆ ತೆರಿಗೆ ಕಡಿತದಲ್ಲಿಯೂ ಭ್ರಷ್ಟಾಚಾರ
ರಫೇಲ್ ನ ಭಾರತೀಯ ಒಪ್ಪಂದದಲ್ಲಿ ಪಾಲುದಾರನಾಗಿರುವ ರಿಲಾಯನ್ಸ್ ಗ್ರೂಪ್ ನ ಉದ್ಯಮಿ ಅನಿಲ್ ಅಂಬಾನಿ ಒಡೆತದನ ಫ್ಲಾಗ್ ಆಟ್ಲಾಂಟಿಕ್ ಫ್ರಾನ್ಸ್ ಕಂಪೆನಿಗೆ ಭಾರೀ ಮೊತ್ದ ತೆರಿಗೆ ಕಡಿತ ಮಾಡಿರುವ ಹಿಂದೆ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಬಗ್ಗೆಯೂ ಮೆಡಿಯಾಪಾರ್ಟ್ ತನ್ನ ವರದಿಯಲ್ಲಿ ಸುಳಿವು ನೀಡಿದೆ.
ರಫೇಲ್ ಗುತ್ತಿಗೆಗೆ ಸಂಬಂಧಿಸಿದಂತೆ 151 ದಶಲಕ್ಷ ಯುರೋಡಾಲರ್ ಮೊತ್ತದ ತೆರಿಗೆ ಬಿಲ್ ಅನ್ನು ಕಡಿಮೆಗೊಳಿಸಲು ಮಧ್ಯಪ್ರವೇಶಿಸಬೇಕೆಂದುಕೋರಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ನ ಮಾಜಿ ವಿತ್ತ ಸಚಿವ, ಹಾಲಿ ಪ್ರಧಾನಿ ಇಮಾನುಯೆಲ್ ಮ್ಯಾಕ್ರೊನ್ ಹಾಗೂ ವಿತ್ತ ಸಚಿವ ಮೈಕೆಲ್ ಸಾಪಿನ್ ಅವರಿಗೆ ಪತ್ರ ಬರೆದಿದ್ದರೆಂದು ವರದಿ ಹೇಳಿದೆ.
ತರುವಾಯ ಅನಿಲ್ ಅಂಬಾನಿ ಅವರಿಗೆ 6.6 ದಶಲಕ್ಷ ಯುರೋ ಡಾಲರ್ ತೆರಿಗೆ ಮೊತ್ತದ ತೆರಿಗೆಯನ್ನು ಪಾವತಿಸುವಂತೆ ಫ್ರಾನ್ಸ್ ಸರಕಾರ ಸೂಚಿಸಿತೆಂದು ವರದಿ ಬಹಿರಂಗಪಡಿಸಿದೆ.
2015ರಲ್ಲಿ ಪ್ರಧಾನಿ ಮೋದಿಯವರ ಫ್ರಾನ್ಸ್ ಪ್ರವಾಸದ ಸಂದರ್ಭ ಅನಿಲ್ ಅಂಬಾನಿ ಜೊತೆಗಿದ್ದರು. ಈ ಪ್ರವಾಸದ ವೇಳೆ ಪ್ರಧಾನಿಯವರು, ಈ ಮೊದಲು ರಫೇಲ್ ಕಂಪೆನಿಯು ಭಾರತದ ಎಚ್ಎಎಲ್ ಜೊತೆ ಏರ್ಪಡಿಸಿಕೊಂಡಿದ್ದ 126 ರಫೇಲ್ ಜೆಟ್ ಗಳ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದವನ್ನು ರದ್ದುಪಡಿಸಿ, ಡಸಾಲ್ಟ್ ಸಂಸ್ಥೆಯೆಂದಲೇ ನೇರವಾಗಿ 36 ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿಹಾಕಿದ್ದರು.
ಮೋದಿ ಸರಕಾದ ಸೂಚನೆಯ ಮೇರೆಗೆ ಅನಿಲ್ ಅಂಬಾನಿಯವರನ್ನು ರಫೇಲ್ ಒಪ್ಪಂದದ ಪಾಲುದಾರನನ್ನಾಗಿ ಮಾಡಲಾಯಿತೆಂಬುದನ್ನು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಅವರು 2018ರಲ್ಲಿ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಆದರೆ ಇದನ್ನು ರಿಲಾಯನ್ಸ್ ಹಾಗೂ ಭಾರತ ಸರಕಾರವು ನಿರಾಕರಿಸಿತ್ತು. ಫ್ರೆಂಚ್ ಕಂಪೆನಿಯು ವಾಣಿಜ್ಯ ದೃಷ್ಟಿಯಿಂದ ಕೈಗೊಂಡ ನಿರ್ಧಾರದಲ್ಲಿ ತಮ್ಮ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿತ್ತು. ಭಾರತದ ಸುಪ್ರೀಂಕೋರ್ಟ್ ಕೂಡಾ ಈ ಬಗ್ಗೆ ತನಿಖೆ ನಡೆಸಲು ನಿರಾಕರಿಸಿತ್ತು. ಆದರೆ ಪ್ರಸಕ್ತ ಫ್ರಾನ್ಸ್ ನಲ್ಲಿ ಈ ಬಗ್ಗೆ ನಡೆಯುತ್ತಿರುವ ತನಿಖೆಯ ಅಂಶವಾಗಿ ಇದನ್ನು ಪರಿಗಣಿಸಲಾಗಿದೆ.
ಮ್ಯಾಕ್ರೋನ್ ಕೂಡಾ ಶಾಮೀಲು?
ರಫೇಲ್ ಒಪ್ಪಂದದ ಪ್ರಮುಖ ಫಲಾನುಭವಿಯಾದ ಅನಿಲ್ ಅಂಬಾನಿಯ ಫ್ಲಾಗ್ ಅಟ್ಲಾಂಟಿಕ್ ಫ್ರಾನ್ಸ್ ಕಂಪೆನಿಗೆ 151 ದಶಲಕ್ಷ ಮೊತ್ತದ ತೆರಿಗೆ ಕಡಿತವನ್ನು ನೀಡಲಾಗಿದೆ. ಆಗ ಸಚಿವರಾದ ಸಾಪಿನ್ ಹಾಗೂ ಮ್ಯಾಕ್ರೋನ್ ಅವರಿಗೆ ಎಪ್ರಿಲ್ 14ರಂದು ಪತ್ರ ಬರೆದ ಬಳಿಕ ಈ ತೆರಿಗೆ ಕಡಿತ ಲಭ್ಯವಾಗಿದೆ.
ಹಾಲಿ ಪ್ರಧಾನಿ ಮ್ಯಾಕ್ರೊನ್ ಅವರು ಆ ಸಮಯದಲ್ಲಿ ಸಾರ್ವಜನಿಕ ವಿತ್ತ ನಿರ್ದೇಶನಾಲಯದ ಮೇಲೆ ಯಾವುದೇ ಅಧಿಕಾರವನ್ನು ಹೊಂದಿರಲಿಲ್ಲ. ಹೀಗಿದ್ದರೂ, ಈ ಪ್ರಕರಣದಲ್ಲಿ ಮ್ಯಾಕ್ರೊನ್ ಅವರು ಶಾಮೀಲಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವರದಿ ಹೇಳಿದೆ.







