ಜೈಲಿನಿಂದ ಬಿಡುಗಡೆಯಾದ ಮರುದಿನವೇ ಸೌರವ್ ದಾಸ್, ಅಶುತೋಷ್ ರಂಕಾಗೆ ದಿಲ್ಲಿ ಕ್ರೈಂ ಬ್ರಾಂಚ್ ನಿಂದ ಸಮನ್ಸ್

Photo: PTI
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಹ-ಸಂಯೋಜಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರಿಗೆ ದಿಲ್ಲಿ ಪೊಲೀಸರ ಅಪರಾಧ ವಿಭಾಗ (Crime Branch) ಸಮನ್ಸ್ ಜಾರಿಗೊಳಿಸಿದೆ. ಒಂದು ವಾರ ನ್ಯಾಯಾಂಗ ಬಂಧನದಲ್ಲಿದ್ದು ತಿಹಾರ್ ಜೈಲಿನಿಂದ ಬಿಡುಗಡೆಯಾದ ಮರುದಿನವೇ ಸಮನ್ಸ್ ಜಾರಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಗುರುವಾರ ಮಧ್ಯಾಹ್ನ 12 ಗಂಟೆಗೆ ರಾಜೌರಿ ಗಾರ್ಡನ್ ನಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಹಾಜರಾಗುವಂತೆ ದಾಸ್ ಮತ್ತು ರಂಕಾ ಅವರಿಗೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಅಜಿಂಕ್ಯ ಶಿಂಧೆ ಅವರಿಗೂ ಸಮನ್ಸ್ ನೀಡಲಾಗಿದೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸೆಕ್ಷನ್ 188ರ ಉಲ್ಲಂಘನೆ ಹಾಗೂ ಖಾಸಗಿ ಆಸ್ತಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ CJP ಸದಸ್ಯರು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಜಂತರ್ ಮಂತರ್ ಗೆ ಪ್ರವೇಶಿಸಲು ಯತ್ನಿಸಿದ್ದು ಹಾಗೂ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಿಸಿದ್ದು ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಯನ್ನು ಅಪರಾಧ ವಿಭಾಗ ಮುಂದುವರಿಸಿದೆ.






