SIR | ಚುನಾವಣಾ ಆಯೋಗದ ಕ್ರಮಗಳ ಬಗ್ಗೆ ಇಬ್ಬರು ಚುನಾವಣಾ ಆಯುಕ್ತರಿಂದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ; Indian Express ತನಿಖಾ ವರದಿ

ಸುಖ್ಬೀರ್ ಸಿಂಗ್ ಸಂಧು, ಜ್ಞಾನೇಶ್ ಕುಮಾರ್, ವಿವೇಕ್ ಜೋಶಿ | Photo: @ECISVEEP/X via PTI
ಹೊಸದಿಲ್ಲಿ: ಕಳೆದ 10 ತಿಂಗಳ ಅವಧಿಯಲ್ಲಿ, ಭಾರತೀಯ ಚುನಾವಣಾ ಆಯೋಗದ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎಸ್ಐಆರ್ ಪ್ರಕ್ರಿಯೆಯ ವಿವಿಧ ಅಂಶಗಳಿಗೆ ಸಂಬಂಧಿಸಿ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು Indian Express ವರದಿಯು ತಿಳಿಸಿದೆ. ಇದರ ಬೆನ್ನಲ್ಲೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಆಗ್ರಹ ಕೇಳಿ ಬಂದಿದೆ.
ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಭಾರತದ ಚುನಾವಣಾ ಆಯುಕ್ತರಾಗಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ನೇತೃತ್ವ ವಹಿಸಿದ್ದಾರೆ. ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಪಕ್ಷಗಳು ಹಾಗೂ ಹಲವು ಹಕ್ಕುಗಳ ಸಂಘಟನೆಗಳು ಈ ಮೊದಲು ತೀವ್ರ ಟೀಕೆ ವ್ಯಕ್ತಪಡಿಸಿದ್ದವು.
ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು 2025ರ ಜೂನ್ನಲ್ಲಿ ಬಿಹಾರದಲ್ಲಿ ಆರಂಭವಾಯಿತು. ಸಾಮಾನ್ಯವಾಗಿ ಮತದಾರರ ಪಟ್ಟಿ ಪರಿಷ್ಕರಿಸುವ ವಾಡಿಕೆಯ ಪ್ರಕ್ರಿಯೆಯಾಗಬೇಕಿದ್ದ SIR, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಿದೆ. ಇದರಿಂದ ಯಾರು ಮತ ಚಲಾಯಿಸಲು ಅರ್ಹರು ಮತ್ತು ಯಾರು ಅರ್ಹರಲ್ಲ ಎಂಬುದನ್ನು ನಿರ್ಧರಿಸುವಲ್ಲಿ ಚುನಾವಣಾ ಆಯೋಗದ ಪಾತ್ರದ ಕುರಿತು ತೀವ್ರ ಸಾರ್ವಜನಿಕ ಚರ್ಚೆ ನಡೆಯುತ್ತಿದೆ.
Indian Express ರಿತಿಕಾ ಚೋಪ್ರಾ ಅವರ ವಿಶೇಷ ತನಿಖಾ ವರದಿಯಲ್ಲಿ ಏನಿದೆ?
ಈ ಕುರಿತು Indian Express ನಡೆಸಿದ ತನಿಖೆಯು SIR ಪ್ರಕ್ರಿಯಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರ ನಡುವೆಯೇ ಪದೇಪದೇ ಭಿನ್ನಾಭಿಪ್ರಾಯ, ಪ್ರಶ್ನೆ ಉದ್ಭವಿಸಿದೆ ಎಂಬುದನ್ನು ಬಹಿರಂಗಪಡಿಸಿದೆ. ರಾಷ್ಟ್ರಮಟ್ಟದಲ್ಲಿ SIR ಪ್ರಕ್ರಿಯೆ ಜಾರಿಗೊಳಿಸುವ ಕಾರ್ಯವು ಮೂವರು ಚುನಾವಣಾ ಆಯುಕ್ತರ ಮೇಲ್ವಿಚಾರಣೆಯಲ್ಲೇ ನಡೆದಿದೆ. ಆದರೆ, ಕಳೆದ 10 ತಿಂಗಳಲ್ಲಿ ತಮ್ಮ ಗಮನಕ್ಕೆ ಬಾರದೆ ಕೈಗೊಂಡ ನಿರ್ಧಾರಗಳು ಮತ್ತು ಹೊರಡಿಸಿದ ಆದೇಶಗಳ ವಿರುದ್ಧ ಸಂಧು ಮತ್ತು ಜೋಶಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಒಂದೇ ದಿನದಲ್ಲಿ ನಾಲ್ಕು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.
ಹೊಸ ಮತದಾರರನ್ನು ಸೇರ್ಪಡೆಗೊಳಿಸುವುದು ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ವಿಚಾರದಲ್ಲಿ ತಮಗೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ ಎಂದು ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಹೇಳಿಕೊಂಡಿದ್ದಾರೆ.
ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದ ಕ್ರಮಗಳನ್ನು ಅವರು ‘ಅನಧಿಕೃತ, ಕಾನೂನುಬಾಹಿರ’ ಎಂದು ಕರೆದಿದ್ದು, ರಾಜ್ಯದ ಅಧಿಕಾರಿಗಳನ್ನು ಬದಿಗೊತ್ತಿ ಮತದಾರರ ದತ್ತಾಂಶವನ್ನು ದಿಲ್ಲಿಯಲ್ಲಿ ‘ಕೇಂದ್ರೀಕರಿಸುವ’ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಮತದಾರರ ಸಾಫ್ಟ್ ವೇರ್ನ ಸಮಗ್ರತೆ ಮತ್ತು ವಿಶ್ವಾಸಾರ್ಹತೆ ಕುರಿತು ಕಳವಳ ವ್ಯಕ್ತಪಡಿಸಿದ ಇಬ್ಬರು ಚುನಾವಣಾ ಆಯುಕ್ತರು, ಈ ವಿಚಾರದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯನ್ನೂ ಸಂಪರ್ಕಿಸಿದ್ದಾರೆ. ಇದು ಚುನಾವಣಾ ಆಯೋಗದೊಳಗಿನ ಬಿರುಕು ಎಂದು ಪರಿಗಣಿಸಲಾಗಿದ್ದು, ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಯು ಉಲ್ಲೇಖಿಸಿದೆ.
ಮತದಾರರ ಪಟ್ಟಿಗೆ ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳನ್ನು ಅಳಿಸುವುದು ಮತ್ತು ಮರುಸ್ಥಾಪಿಸುವುದು, SIR ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಮರುಸ್ಥಾಪಿಸುವ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಹಾಗೂ ಸಂಪೂರ್ಣ ಮತದಾರರ ಪಟ್ಟಿಯ ಸಂರಕ್ಷಣೆ ಮತ್ತು ಭದ್ರತೆಯಂತಹ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಈ ಆಕ್ಷೇಪಗಳನ್ನು ವ್ಯಕ್ತಪಡಿಸಲಾಗಿದೆ. ಈ ಎಲ್ಲ ಆಕ್ಷೇಪಗಳ ಪ್ರತಿಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೂ ಕಳುಹಿಸಲಾಗಿತ್ತು. ಕೆಲವು ಆಕ್ಷೇಪಗಳನ್ನು ಅವರ ಮೇಲ್ವಿಚಾರಣೆಯಲ್ಲಿರುವ ಉಪ ಚುನಾವಣಾ ಆಯುಕ್ತರಿಗೂ ಕಳುಹಿಸಲಾಗಿತ್ತು.
ಇಬ್ಬರು ಚುನಾವಣಾ ಆಯುಕ್ತರ ಲಿಖಿತ ಸಲಹೆಗೆ ವಿರುದ್ಧವಾಗಿ ಚುನಾವಣಾ ಆಯೋಗ ನಡೆದುಕೊಂಡಿದೆ ಎಂದು ಸಂಧು ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಆಯೋಗದ ಕ್ರಮ ಅನಧಿಕೃತ ಮತ್ತು ಕಾನೂನುಬಾಹಿರ ಎಂದು ಹೇಳಿದ್ದಾರೆ.
ಇದಲ್ಲದೆ ಜೋಶಿ ಮತ್ತು ಸಂಧು ಅವರು ಪ್ರತ್ಯೇಕವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದು, ಕೆಲಸದ ಹಂಚಿಕೆಯಲ್ಲಿ ಮಾಡಲಾದ ಬದಲಾವಣೆಗಳ ಕುರಿತು ದೂರು ನೀಡಿದ್ದರು. ಈ ಬದಲಾವಣೆಗಳು ವಾಸ್ತವವಾಗಿ, ಮತದಾರರ ಪಟ್ಟಿಯ ಐಟಿ (IT) ವ್ಯವಸ್ಥೆಯ ಮೇಲ್ವಿಚಾರಣಾ ಹಂತವೊಂದನ್ನು ತೆಗೆದುಹಾಕಿದ್ದವು. ಈ ಬದಲಾವಣೆಗಳನ್ನು ತಮ್ಮ ಗಮನಕ್ಕೆ ತಾರದೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಾದ ಬಳಿಕ, ಸೆಪ್ಟೆಂಬರ್ 9ರಂದು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರು ಸಭೆ ನಡೆಸಿದರು. ನಾಲ್ಕು ತಿಂಗಳ ಬಳಿಕ ನಡೆದ ಅವರ ಮೊದಲ ಪೂರ್ಣ ಸಭೆ ಇದಾಗಿತ್ತು.
ಉದಾಹರಣೆಗೆ, ಆಗಸ್ಟ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳಿಂದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದ ಮತದಾರರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಕುರಿತು ಸಂಧು ಅವರು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಮೇಲ್ಮನವಿಗಳ ಮೂಲಕ ಆ ಮತದಾರರ ಹೆಸರುಗಳನ್ನು ಚುನಾವಣಾ ಪಟ್ಟಿಯಿಂದ ಅಳಿಸುವಂತೆ ಕೋರಲಾಗಿತ್ತು.
“ECI ಪರವಾಗಿ ಈ ಮೇಲ್ಮನವಿಗಳನ್ನು ಸಲ್ಲಿಸಲು ಯಾರಿಗೆ ಅಧಿಕಾರ ನೀಡಲಾಗಿತ್ತು ಮತ್ತು ಆ ಅಧಿಕಾರ ಯಾರು ನೀಡಿದ್ದರು?” ಎಂದು ಸಂಧು ಅವರು ECI ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅಲ್ಲದೆ, ಚುನಾವಣಾ ಆಯೋಗದ ಪರವಾಗಿ ವಾಸ್ತವವಾಗಿ ಈ ಮೇಲ್ಮನವಿಗಳನ್ನು ಸಲ್ಲಿಸಿದವರು ಯಾರು?” ಎಂದು ಅವರು ಪ್ರಶ್ನಿಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಮೇಲ್ಮನವಿಗಳನ್ನು ಸಲ್ಲಿಸಲು ಆಧಾರ ಹಾಗೂ ಅದರ ಪ್ರಕ್ರಿಯೆ ಕುರಿತು ನನಗೆ, ಜೋಶಿ ಅವರಿಗೆ ಅಥವಾ ಪಶ್ಚಿಮ ಬಂಗಾಳದ ಹಾಲಿ ಮುಖ್ಯ ಚುನಾವಣಾಧಿಕಾರಿ ಅವರಿಗೆ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎಂದು ಸಂಧು ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ನಡೆದ SIR ಪ್ರಕ್ರಿಯೆಯು ರಾಜ್ಯದ 22 ಲಕ್ಷಕ್ಕೂ ಹೆಚ್ಚು ಮತದಾರರ ಮತದಾನದ ಹಕ್ಕನ್ನು ಕಸಿದುಕೊಂಡಿತ್ತು. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗಿದ್ದ 22.21 ಲಕ್ಷ ಮತದಾರರು, ತಮ್ಮ ಹೆಸರುಗಳನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಸೆಪ್ಟೆಂಬರ್ 18ರಂದು ECI ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಹೊಸ ಮತದಾರರು ತಮ್ಮ ಪೋಷಕರು/ಅಜ್ಜ-ಅಜ್ಜಿಯರು ಹಿಂದಿನ ಎಸ್ಐಆರ್ನ ಮತದಾರರ ಪಟ್ಟಿಯಲ್ಲಿ ಇದ್ದಾರೆಯೇ ಎಂಬುದಕ್ಕೆ ಉತ್ತರಿಸುವುದನ್ನು ಕಡ್ಡಾಯಗೊಳಿಸುವ ರೀತಿಯಲ್ಲಿ ಫಾರ್ಮ್-6 ಅನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಜೋಶಿ ಅವರು ಈ ವರ್ಷದ ಮೇ ತಿಂಗಳಲ್ಲಿ ಎಚ್ಚರಿಸಿದ್ದರು.
ಫಾರ್ಮ್-6ರಲ್ಲಿ ಬದಲಾವಣೆ ‘ಅನಧಿಕೃತ ಮತ್ತು ಕಾನೂನುಬಾಹಿರ’
ಸರಕಾರ ನಿಯಮಗಳಿಗೆ ತಿದ್ದುಪಡಿ ತರದೆ ಫಾರ್ಮ್-6ರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಜೋಶಿ ಅವರು ಹೇಳಿದ್ದರು. ಇದಕ್ಕೆ ಸಂಧು ಅವರೂ ಒಪ್ಪಿಗೆ ಸೂಚಿಸಿದ್ದರು. ಆದರೆ, ಈ ಬದಲಾವಣೆಯನ್ನು ಮಾಡಲಾಗಿತ್ತು.
ಆ ಬದಲಾವಣೆಯು "ಅನಧಿಕೃತ ಮತ್ತು ಕಾನೂನುಬಾಹಿರ"ವಾಗಿದ್ದು, ಅದನ್ನು "ತಕ್ಷಣವೇ ತೆಗೆದುಹಾಕಬೇಕು" ಎಂದು ಸಂಧು ಆಗಸ್ಟ್ 13 ರಂದು ಅಧಿಕೃತವಾಗಿ ಹೇಳಿದ್ದರು. ಆದರೂ, ಆ ಪ್ರಶ್ನೆಯು 'ಫಾರ್ಮ್ 6'ರ ಭಾಗವಾಗಿಯೇ ಮುಂದುವರಿದಿದೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಮೇ ತಿಂಗಳಲ್ಲಿ, "ಮತದಾರರ ಪಟ್ಟಿಯ ದತ್ತಾಂಶ ಸಂಗ್ರಹದ (ಡೇಟಾಬೇಸ್) ಕೇಂದ್ರೀಕರಣ"ದ ಬಗ್ಗೆ ಜೋಶಿ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, "ಸಂಬಂಧಪಟ್ಟ ಶಾಸನಬದ್ಧ ಪ್ರಾಧಿಕಾರಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಮತದಾರರ ದತ್ತಾಂಶದಲ್ಲಿ ಯಾವುದೇ ಬದಲಾವಣೆ ಮಾಡಲು ಅಧಿಕಾರವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಡಿಟ್ ನಡೆಸುವಂತೆ ಅವರು ಪ್ರಸ್ತಾಪಿಸಿದ್ದರು.
ಆಗಸ್ಟ್ನಲ್ಲಿ ಸಂಧು ಅವರೂ ಇದೇ ವಿಚಾರವನ್ನು ಪುನರುಚ್ಚರಿಸಿದರು. ಮತದಾರರ ಪಟ್ಟಿಯನ್ನು ನಿರ್ವಹಿಸಲು ಬಳಸುವ ಡಿಜಿಟಲ್ ವ್ಯವಸ್ಥೆಯಾದ ERONet ಪೋರ್ಟಲ್ಗೆ ರಾಜ್ಯಮಟ್ಟದ ಚುನಾವಣಾ ಅಧಿಕಾರಿಗಳಿಗೆ “ಸರಿಯಾದ ಮತ್ತು ಸಂಪೂರ್ಣ ಪ್ರವೇಶವಿಲ್ಲ” ಎಂದು ಅವರು ವರದಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ECIಯ ಮಾಹಿತಿ ತಂತ್ರಜ್ಞಾನ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಅವರಿಗೆ “ಕಾನೂನಿನ ಪ್ರಕಾರ ಶಾಸನಬದ್ಧ ಅಧಿಕಾರಿಗಳಿಗೆ ನೀಡಲಾಗಿರುವ ಸಮರ್ಪಕ ಹಾಗೂ ಸಂಪೂರ್ಣ ಪ್ರವೇಶ ಮತ್ತು ಕಾರ್ಯನಿರ್ವಹಿಸುವ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ” ಎಂದು ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇಬ್ಬರು ಚುನಾವಣಾ ಆಯುಕ್ತರು ಈ ಬಗ್ಗೆ ಸಂಪುಟ ಕಾರ್ಯದರ್ಶಿಗೆ ದೂರು ಕೂಡ ನೀಡಿದ್ದರು. ತಮ್ಮ ಆಕ್ಷೇಪಣೆಗಳ ಪ್ರತಿಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೂ ಕಳುಹಿಸಲಾಗಿತ್ತು ಮತ್ತು ಕೆಲವು ಪ್ರತಿಗಳನ್ನು ಅವರ ಅಧೀನದಲ್ಲಿರುವ ಉಪ ಚುನಾವಣಾ ಆಯುಕ್ತರಿಗೂ ರವಾನಿಸಲಾಗಿತ್ತು.
ಇದಲ್ಲದೆ, ಏಪ್ರಿಲ್ 16ರಂದು ಸಂಧು ಅವರು ECIಯ ಹಿರಿಯ ಅಧಿಕಾರಿಗಳಿಗೆ “ಚುನಾವಣಾ ಆಯೋಗದ ಹೆಸರಿನಲ್ಲಿ ಅನೇಕ ಸಂವಹನಗಳು ನಡೆಯುತ್ತಿದೆ. ಆದರೆ, ಅವುಗಳಿಗೆ ಆಯೋಗದ ಅನುಮೋದನೆ ಇರುವುದಿಲ್ಲ ಎಂದು ತಿಳಿಸಿದ್ದರು. ಇನ್ನು ಮುಂದೆ ಹೊರಡಿಸುವ ಪ್ರತಿಯೊಂದು ಸಂವಹನವೂ “2023ರ ಕಾಯ್ದೆಯ ನಿಬಂಧನೆಗಳ ಪ್ರಕಾರ” ಆಯೋಗದ ಅನುಮೋದನೆ ಹೊಂದಿರಬೇಕು ಎಂದು ಅವರು ಸೂಚಿಸಿದ್ದರು.
ಇದಾದ 8 ದಿನಗಳ ನಂತರ, ಜೋಶಿ ಅದೇ ಅಧಿಕಾರಿಗಳಿಗೆ, ʼಆಯೋಗ'ದ ಅಗತ್ಯ ಅನುಮೋದನೆಯಿಲ್ಲದೆ ಚುನಾವಣಾ ಆಯೋಗದ ಹೆಸರಿನಲ್ಲಿ ಹಲವಾರು ಸಂವಹನಗಳನ್ನು ಹೊರಡಿಸಲಾಗುತ್ತಿದೆ" ಎಂದು ಹೇಳಿದರು. ಅಲ್ಲದೆ, "ಸಂವಿಧಾನದ 324ನೇ ವಿಧಿ ಮತ್ತು ಸಂಬಂಧಿತ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ", ಇನ್ನು ಮುಂದೆ ಹೊರಡಿಸುವ ಎಲ್ಲಾ ಸಂವಹನಗಳಿಗೂ ಅಂತಹ ಅನುಮೋದನೆ ಕಡ್ಡಾಯವಾಗಿರಬೇಕು ಎಂದು ಅವರು ತಿಳಿಸಿದರು.
ಇಂಡಿಯನ್ ಎಕ್ಸ್ಪ್ರೆಸ್ ತನಿಖಾ ವರದಿ ಪ್ರಕಟಿಸಿದ ಬಳಿಕ, ರಾಜಕೀಯ ವಿಜ್ಞಾನಿ ಸುಹಾಸ್ ಪಾಲ್ಶಿಕರ್ ಅವರು ‘ಎಕ್ಸ್’ನಲ್ಲಿ, “ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಭಿನ್ನಮತ ವ್ಯಕ್ತಪಡಿಸಿದ್ದರೆ, ಅಂತಹ ಎಲ್ಲಾ ಆದೇಶಗಳನ್ನು ಅನುಷ್ಠಾನಗೊಳಿಸಲಾಗದವು ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
SIR ಪ್ರಕ್ರಿಯೆಯನ್ನು ಪ್ರಶ್ನಿಸಿ ಅರ್ಜಿದಾರರ ಪರ ವಾದಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್, ಈ ವಿಚಾರವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಹಿರಂಗವಾಗಿರುವ ಮಾಹಿತಿಗಳು SIR ಪ್ರಕ್ರಿಯೆಯ ಪಾರದರ್ಶಕತೆಯ ಕೊರತೆಯ ಸ್ವರೂಪವನ್ನು ಮತ್ತಷ್ಟು ಬಹಿರಂಗಪಡಿಸಿದೆ. ಈ ಪ್ರಕ್ರಿಯೆಯನ್ನು ಪ್ರತಿಪಕ್ಷಗಳು ಟೀಕಿಸಿದ್ದು, ಲಕ್ಷಾಂತರ ಮತದಾರರನ್ನು, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರನ್ನು ಮತದಾನದ ಹಕ್ಕಿನಿಂದ ವಂಚಿಸಲು ಭಾರತೀಯ ಜನತಾ ಪಕ್ಷ SIR ಅನ್ನು ಒಂದು ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿವೆ.






