ಆಟೊ ಚಾಲಕನಿಂದ ʼಶಿಂದೆ ಶಿವಸೇನೆʼಗೆ ಜನ್ಮ ನೀಡುವವರೆಗೆ | ಏಕನಾಥ್ ಶಿಂದೆಯ ರೋಚಕ ಪಯಣ

ಏಕನಾಥ್ ಶಿಂದೆ | PC : PTI
ಮುಂಬೈ: ಥಾಣೆ ಜಿಲ್ಲೆಯಲ್ಲಿ ಆಟೊ ಚಾಲನೆಯಿಂದ ಹಿಡಿದು, ಸಣ್ಣಪುಟ್ಟ ಉದ್ಯೋಗಗಳನ್ನು ಮಾಡುತ್ತಿದ್ದ ಏಕನಾಥ್ ಶಿಂದೆ, ಮುಖ್ಯಮಂತ್ರಿಯಾಗುವವರೆಗೆ ಸವೆಸಿದ ಹಾದಿ ನಿಜಕ್ಕೂ ರೋಚಕವಾಗಿದೆ.
ಭಾಯಿ ಎಂದೇ ಜನಪ್ರಿಯರಾಗಿರುವ 60 ವರ್ಷದ ಏಕನಾಥ್ ಶಿಂದೆ, ಮಹಾರಾಷ್ಟ್ರದಂತಹ ದೊಡ್ಡ ರಾಜ್ಯದ ಚುಕ್ಕಾಣಿಯನ್ನು ಎರಡೂವರೆ ವರ್ಷಗಳ ಕಾಲ ಹಿಡಿದಿದ್ದು ಸಾಮಾನ್ಯ ಸಂಗತಿಯಲ್ಲ. ಆದರೆ, ರಾಜಕೀಯ ಅಂಕಗಣಿತ ಹಾಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಿರುವುದರಿಂದ, ಅವರೀಗ ಉಪ ಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ.
ಆದರೆ, ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ, ತಮ್ಮ ವೃತ್ತಿಜೀವನದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಶಿಂದೆ, ಶಿವಸೇನೆಯ ವರಿಷ್ಠ ಬಾಳಾಸಾಹೇಬ್ ಠಾಕ್ರೆ ಹಾಗೂ ಥಾಣೆ ಪ್ರಾಂತ್ಯದ ಶಿವಸೇನೆಯ ಬಲಿಷ್ಠ ನಾಯಕ ಆನಂದ್ ದಿಘೆ ಪ್ರಭಾವಕ್ಕೆ ಒಳಗಾದರು.
ಆನಂದ್ ದಿಘೆ ಜೀವನಾಧಾರಿತ “ಧರ್ಮವೀರ್: ಮುಕ್ಕಮ್ ಪೋಸ್ಟ್ ಥಾಣೆ” ಚಿತ್ರ ಬಿಡುಗಡೆಯಾದಾಗ, ಶಿಂದೆಯ ಮಹತ್ವಾಕಾಂಕ್ಷೆ ಸ್ಪಷ್ಟವಾಗಿ ಬೆಳಕಿಗೆ ಬಂದಿತು.
“ಥಾಣೆಯ ಬಾಳಾ ಠಾಕ್ರೆ” ಎಂದೇ ಹೆಸರುವಾಸಿಯಾಗಿದ್ದ ದಿಘೆ, ಪಾಲ್ಘರ್-ಥಾಣೆ-ರಾಯಗಢ ಪ್ರಾಂತ್ಯಗಳಲ್ಲಿ ಭಾರಿ ಪ್ರಭಾವಶಾಲಿಯಾಗಿದ್ದರು. ಡಿಘೆಯಂತೆಯೆ ಗಡ್ಡ ಬಿಟ್ಟಿರುವ ಶಿಂದೆ, ಹಣೆಯ ಮೇಲೆ ಕೇಸರಿ ತಿಲಕ ಇಟ್ಟುಕೊಳ್ಳುತ್ತಾರೆ. ಯಾವಾಗಲೂ ಇಸ್ತ್ರಿ ಮಾಡಿದ ತುಂಬುತೋಳಿನ ಬಿಳಿ ಶರ್ಟ್ ಮತ್ತು ಪ್ಯಾಂಟ್ ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಶಿಂದೆ ಸತಾರ ಜಿಲ್ಲೆಯ ಜವಾಲಿ ಪಟ್ಟಣದ ಡಾರೆ ಗ್ರಾಮದ ಮರಾಠ ಕುಟುಂಬಕ್ಕೆ ಸೇರಿದವರು. ಫೆಬ್ರವರಿ 9, 1964ರಲ್ಲಿ ಜನಿಸಿದ ಶಿಂದೆ, ತಮ್ಮ ಪದವಿ ವ್ಯಾಸಂಗ ಪೂರ್ಣಗೊಳ್ಳುವ ಮೊದಲೇ ಶಿಕ್ಷಣ ತೊರೆದರು. ಶಿಂದೆ ಶಿವಸೇನೆಯನ್ನು ಸೇರ್ಪಡೆಯಾದಾಗ, ಶೈಶವಾವಸ್ಥೆಯಲ್ಲಿದ್ದ ಬಿಜೆಪಿ, ಮರಾಠಿ ಭಾಷಿಕರು ಹಾಗೂ ಹಿಂದುತ್ವದ ಸಮರ್ಥನೆಯಲ್ಲಿ ತೊಡಗಿತ್ತು.
ನಂತರ ಮುಂಬೈನ ನೆರೆಯ ಥಾಣೆ ಜಿಲ್ಲೆಗೆ ಸ್ಥಳಾಂತರಗೊಂಡ ಶಿಂದೆ, ಅಲ್ಲಿರುವ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿ ನೆಲೆಸಿದರು. 1980ರ ದಶಕದಲ್ಲಿ ಶಿವಸೇನೆ ಸೇರ್ಪಡೆಯಾದ ಶಿಂದೆ, ನಂತರ ಕಿಸಾನ್ ನಗರದ ಶಾಖಾ ಪ್ರಮುಖರಾಗಿ ನೇಮಕವಾದರು. ಇದಾದ ನಂತರ, ಅವರು ಅನೇಕ ಹೋರಾಟಗಳ ಮುಂಚೂಣಿಯಲ್ಲಿದ್ದರು. 1985ರಲ್ಲಿ ನಡೆದಿದ್ದ ಮಹಾರಾಷ್ಟ್ರ-ಕರ್ನಾಟಕ ಗಡಿ ಹೋರಾಟದಲ್ಲೂ ಅವರು ಭಾಗಿಯಾಗಿದ್ದರು.
1997ರಲ್ಲಿ ಥಾಣೆ ಮಹಾನಗರ ಪಾಲಿಕೆಗೆ ಚುನಾಯಿತರಾದ ಶಿಂದೆಯನ್ನು ಥಾಣೆಯಲ್ಲಿ ಕೆಲಸ ಮಾಡುವಂತೆ ಶಿವಸೇನೆ ನಿಯೋಜಿಸಿತು. ಇದಾದ ನಂತರ, ಅವರು ಥಾಣೆ ಜಿಲ್ಲೆಯ ಕೋಪ್ರಿ-ಪಚ್ಪಖಡಿ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದಾರೆ. ಮೂಳೆ ತಜ್ಞರಾದ ಅವರ ಪುತ್ರ ಡಾ. ಶ್ರೀಕಾಂತ್ ಶಿಂದೆ, ಥಾಣೆ ಜಿಲ್ಲೆಯ ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ.
2014ರಲ್ಲಿ ಸರಕಾರದಲ್ಲಿ ಭಾಗಿಯಾಗದಿರಲು ಆರಂಭದಲ್ಲಿ ಶಿವಸೇನೆ ನಿರ್ಧರಿಸಿದಾಗ, ಸಣ್ಣ ಅವಧಿಗೆ ಏಕನಾಥ್ ಶಿಂದೆ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಸರಕಾರದಲ್ಲಿ ಸೇರ್ಪಡೆಯಾದ ನಂತರ, ಲೋಕೋಪಯೋಗಿ ಇಲಾಖೆ ಸಚಿವರಾದ ಏಕನಾಥ್ ಶಿಂದೆಗೆ ಸಾರ್ವಜನಿಕ ಉದ್ಯಮಗಳು ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಉಸ್ತುವಾರಿಯನ್ನೂ ವಹಿಸಲಾಯಿತು. ಇದರೊಂದಿಗೆ ಅವರು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನೂ ಹೊಂದಿದ್ದರು.
2022ರಲ್ಲಿ ಮಹಾವಿಕಾಸ್ ಅಘಾಡಿ ಸರಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ, ದೇವೇಂದ್ರ ಫಡ್ನವಿಸ್ ನೆರವಿನಿಂದ ಮತ್ತೆ ಮಹಾಯುತಿ ಸರಕಾರವನ್ನು ರಚಿಸಿದರು. ಈ ಸರಕಾರದಲ್ಲಿ ಶಿಂದೆ ಮುಖ್ಯಮಂತ್ರಿಯಾದರೆ, ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಟ್ಟುಕೊಂಡಿದ್ದರು. ಇದಾದ ಒಂದು ವರ್ಷದ ಬಳಿಕ, ಎರಡನೆ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಸೇರ್ಪಡೆಯಾಗಿದ್ದರು.
ವಾಸ್ತವವಾಗಿ, ದೇವೇಂದ್ರ ಫಡ್ನವಿಸ್ ರ ಕನಸಿನ ಯೋಜನೆಯಾಗಿದ್ದ ಮುಂಬೈ-ನಾಗ್ಪುರ ಮಹಾ ಸಂಪರ್ಕ ಹೆದ್ದಾರಿ ಅಥವಾ ಸಮೃದ್ಧಿ ಕಾರಿಡಾರ್ ಅನ್ನು ಏಕನಾಥ್ ಶಿಂದೆ ಕಾರ್ಯರೂಪಕ್ಕೆ ತಂದರು. ಅಲ್ಲದೆ, ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ವಿಸ್ತರಣೆಯ ಮೇಲಸ್ತುವಾರಿಯೂ ಏಕನಾಥ್ ಶಿಂದೆಯದ್ದೇ ಆಗಿದೆ.
ಸೌಜನ್ಯ: deccanherald.com







