ಶಂಕಿತ ಉಗ್ರ ಜಾಲ ಪ್ರಕರಣ | ವಿಚಾರಣೆ ಬಳಿಕ ಒಣ ಹಣ್ಣಿನ ವ್ಯಾಪಾರಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಶ್ರೀನಗರ, ನ. 17:ಶಂಕಿತ ಉಗ್ರ ಜಾಲ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ಕರೆದೊಯ್ದ ನಂತರ ಬೆಂಕಿ ಹಚ್ಚಿಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಒಣ ಹಣ್ಣಿನ ವ್ಯಾಪಾರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಖಾಝಿಗುಂಡದದ ನಿವಾಸಿಯಾಗಿರುವ ಬಿಲಾಲ್ ಅಹ್ಮದ್ ವಾನಿ ತನ್ನ ಮನೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಶ್ರೀನಗರದ ಆಸ್ಪತ್ರೆಯಲ್ಲಿ ರವಿವಾರ ದಾಖಲಿಸಲಾಗಿತ್ತು. ಅವರು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಸಂದರ್ಭ ಬಂಧಿಸಲಾದ ಆರೋಪಿಗಳಲ್ಲಿ ಒಬ್ಬನಾದ ಡಾ. ಅದೀಲ್ ಅಹ್ಮದ್ ರಾಥರ್ನ ನಿವಾಸದ ಸಮೀಪ ವಾಸಿಸುತ್ತಿರುವ ಬಿಲಾಲ್ ಅವರನ್ನು ಪೊಲೀಸರು ಶನಿವಾರ ವಿಚಾರಣೆಗೆ ಕರೆದಿದ್ದರು, ಅನಂತರ ಸಂಜೆ ವಾಪಸ್ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಲಾಲ್ ಅವರ ಪುತ್ರ ಜಾಸಿರ್ ಬಿಲಾಲ್ ಹಾಗೂ ಸಹೋದರ ನಬೀಲ್ ಅಹ್ಮದ್ ನನ್ನು ಪೊಲೀಸರು ವಿಚಾರಣೆಗಾಗಿ ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಬಿಲಾಲ್ನನ್ನು ಅನಂತರ ಪೊಲೀಸರು ಬಿಟ್ಟಿದ್ದರು. ಆದರೆ, ಅವರ ಪುತ್ರನನ್ನು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು.
ಒಣ ಹಣ್ಣಿನ ವ್ಯಾಪಾರಿ ಬಿಲಾಲ್ ಅಹ್ಮದ್ ವಾನಿಯ ಸಾವಿನ ಕುರಿತು ಖಂಡನೆ ವ್ಯಕ್ತಪಡಿಸಿರುವ ಪಿಡಿಪಿ ವರಿಷ್ಠೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಾಬೂಬ ಮುಫ್ತಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ. ‘‘ಕೆಲವು ದಿನಗಳ ಹಿಂದೆ ಪೊಲೀಸರು ಪುತ್ರ ಜಾಸಿರ್ ಹಾಗೂ ಸಹೋದರ ನಬೀಲ್ ವಾನಿಯನ್ನು ವಶಕ್ಕೆ ತೆಗೆದುಕೊಂಡ ಬಳಿಕ ವಂಪೋರಾ ಖಾಝಿಗುಂಡದ ದುಃಖಿತ ತಂದೆ ಬಿಲಾಲ್ ವಾನಿ ಬೆಂಕಿ ಹಚ್ಚಿಕೊಂಡಿದ್ದಾರೆ. ಪುತ್ರ ಹಾಗೂ ಸಹೋದರನ ಬಗ್ಗೆ ಅವರು ಭಯಭೀತರಾಗಿದ್ದರು. ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಪೊಲೀಸರಲ್ಲಿ ವಿನಂತಿಸಿದರು. ಆದರೆ, ಅವರು ಅದಕ್ಕೆ ಅವಕಾಶ ನೀಡಲಿಲ್ಲ’’ ಎಂದು ಹೇಳಿದ್ದಾರೆ.







