ಪೆಟ್ರೋಲ್ - ಡೀಸೆಲ್, ಗೃಹಬಳಕೆಯ ಎಲ್ಪಿಜಿ ದರ ಏರಿಕೆ ಸಾಧ್ಯತೆ; 5–7 ದಿನಗಳಲ್ಲಿ ನಿರ್ಧಾರ: ವರದಿ

Photo Credit : PTI
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ ದರಗಳನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ
ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಲೀಟರ್ ಗೆ ಸುಮಾರು 4–5 ರೂ.ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ದರವು ಸುಮಾರು 40–50 ರೂ.ಗಳಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, 2022ರ ಬಳಿಕ ಬಳಿಕ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳಲ್ಲಿ ಏರಿಕೆ ನಡೆಯಲಿದೆ.
ವಿಧಾನಸಭೆ ಚುನಾವಣೆಗಳ ನಂತರ ದರ ಏರಿಕೆ ಇಲ್ಲ ಎಂದು ಸರ್ಕಾರ ಹೇಳಿದ್ದರೂ, ಜಾಗತಿಕ ತೈಲ ಮಾರುಕಟ್ಟೆಯ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಕಚ್ಚಾ ತೈಲದ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಪೂರೈಕೆ ಅಡಚಣೆಗಳ ಆತಂಕ, ಸಾಗಣೆ ಅಪಾಯಗಳು ಹಾಗೂ ದೀರ್ಘಕಾಲದ ಅಸ್ಥಿರತೆ ಕುರಿತು ಕಳವಳಗಳು ಈ ಏರಿಕೆಗೆ ಕಾರಣವಾಗಿವೆ. ಇದರ ಪರಿಣಾಮವಾಗಿ ತೈಲ ಕಂಪನಿಗಳ ಇನ್ಪುಟ್ ವೆಚ್ಚ ಹೆಚ್ಚಾಗಿದೆ.
ಚಿಲ್ಲರೆ ಇಂಧನ ದರಗಳನ್ನು ದೀರ್ಘಕಾಲದಿಂದ ಸ್ಥಿರವಾಗಿಟ್ಟಿರುವುದರಿಂದ ತೈಲ ಕಂಪನಿಗಳು ನಷ್ಟವನ್ನು ಭರಿಸುತ್ತಿದ್ದು, ಆರ್ಥಿಕ ಒತ್ತಡ ಹೆಚ್ಚಾಗಿದೆ. ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಸರ್ಕಾರದ ಹಣಕಾಸಿನ ಮೇಲೂ ಒತ್ತಡ ತಂದಿದ್ದು, ಸಬ್ಸಿಡಿ ಅಥವಾ ತೆರಿಗೆ ಕಡಿತಗಳ ಮೂಲಕ ಗ್ರಾಹಕರಿಗೆ ಪರಿಹಾರ ನೀಡುವ ಅವಕಾಶಕ್ಕೆ ಸೀಮಿತವಾಗಿದೆ.
5–7 ದಿನಗಳಲ್ಲಿ ನಿರ್ಧಾರ
ಪಶ್ಚಿಮ ಏಷ್ಯಾದ ಪರಿಸ್ಥಿತಿ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಅದರ ಪರಿಣಾಮವನ್ನು ಸರ್ಕಾರ ಗಮನಿಸುತ್ತಿದೆ. ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲವಾದರೂ, ಮುಂದಿನ 5–7 ದಿನಗಳಲ್ಲಿ ದರ ಏರಿಕೆ ಕುರಿತು ತೀರ್ಮಾನ ಸಾಧ್ಯತೆ ಇದೆ.
ಈ ಕುರಿತು ಆಂತರಿಕ ಚರ್ಚೆಗಳು ನಡೆಯುತ್ತಿದ್ದು, ದರ ಏರಿಕೆಯ ಸಮಯ ಮತ್ತು ಪ್ರಮಾಣ ಸೇರಿದಂತೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ತೈಲ ಕಂಪನಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ದರ ಏರಿಕೆಯಿಂದ ಹಣದುಬ್ಬರ ಹೆಚ್ಚಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಇಂಧನ ಮತ್ತು ಎಲ್ಪಿಜಿ ದರ ಏರಿಕೆಯಾದರೆ, ಮನೆಗಳ ಖರ್ಚು ಮತ್ತು ಸಾರಿಗೆ ವೆಚ್ಚಗಳ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ.






