11 ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ದರ ಏರಿಕೆ; ಪೆಟ್ರೋಲ್ ಗೆ 2.61, ಡೀಸೆಲ್ ಗೆ 2.71 ರೂಪಾಯಿ ಏರಿಕೆ!

Photo : PTI
ಹೊಸದಿಲ್ಲಿ: ಇರಾನ್ ಯುದ್ಧದ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಿಸಲಾಗಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್ಗೆ 2.61 ರೂ. ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಿಸಲಾಗಿದೆ.
ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 102.12 ರೂ.ಗೆ ಹಾಗೂ ಡೀಸೆಲ್ ದರ 95.20 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 110 ರೂ. ಗಡಿ ದಾಟಿದೆ. ಮಂಗಳೂರಿನಲ್ಲಿ 110.43 ರೂ. ದರವಿದೆ.
ಕಳೆದ 11 ದಿನದಲ್ಲಿ ಪೆಟ್ರೋಲ್ ಗೆ 7.96 ರೂ. ದರ ಹೆಚ್ಚಳವಾಗಿದೆ.
ಇಂಧನ ದರ ಏರಿಕೆಯಿಂದ ಜನಸಾಮಾನ್ಯರ ಮೇಲಿನ ಹಣದುಬ್ಬರದ ಒತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಿಶೇಷವಾಗಿ ಡೀಸೆಲ್ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಳವಾಗಲಿದ್ದು, ಅದರ ಪರಿಣಾಮ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಬೀಳುವ ಸಾಧ್ಯತೆ ಇದೆ.
ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್ಗೆ 5%ಕ್ಕಿಂತ ಹೆಚ್ಚು ಇಳಿದು 100 ಡಾಲರ್ಗಿಂತ ಕಡಿಮೆಯಾದ ದಿನವೇ ದೇಶದಲ್ಲಿ ಇಂಧನ ದರ ಮತ್ತೆ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ.
ಮೇ 23ರಂದು ಕೂಡ ಇಂಧನ ದರ ಏರಿಕೆ ಮಾಡಲಾಗಿತ್ತು. ಆಗ ಪೆಟ್ರೋಲ್ ದರ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಹೆಚ್ಚಿಸಲಾಗಿತ್ತು. ಜೊತೆಗೆ, ಹೊಸದಿಲ್ಲಿಯಲ್ಲಿ ಸಿಎನ್ಜಿ ದರವನ್ನೂ ಕೆಜಿಗೆ 1 ರೂ. ಹೆಚ್ಚಿಸಿ 81.09 ರೂ.ಗೆ ನಿಗದಿಪಡಿಸಲಾಗಿತ್ತು.
ಏರಿಕೆಗೆ ಕಾರಣವೇನು?
ನಡೆಯುತ್ತಿರುವ ಇರಾನ್ ಯುದ್ಧದಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಉದ್ಭವಿಸಿರುವ ಅನಿಶ್ಚಿತತೆಯಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
ಫೆಬ್ರುವರಿ 28ರಿಂದ ಆರಂಭವಾದ ಎರಡು ತಿಂಗಳ ಇರಾನ್ ಯುದ್ಧದ ಬಳಿಕ ತೈಲ ಕಂಪೆನಿಗಳ ನಷ್ಟ ಪ್ರಮಾಣ ಹೆಚ್ಚಳಗೊಂಡಿದೆ ಎಂದು ಹೇಳಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿ ದಿನಕ್ಕೆ 1,000 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸುತ್ತಿವೆ ಎಂದು NDTV ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಧನ ದರ ಪರಿಷ್ಕರಣೆಗೆ ಮುಂದಾಗಿದೆ.
ದೇಶದಲ್ಲಿ ಇಂಧನ ದರಗಳು ಎಪ್ರಿಲ್ 2022ರಿಂದ ಬಹುತೇಕ ಸ್ಥಿರವಾಗಿದ್ದವು. 2024ರ ಲೋಕಸಭಾ ಚುನಾವಣೆಗೆ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ಗೆ 2 ರೂ.ಗಳಷ್ಟು ಇಳಿಸಲಾಗಿತ್ತು. ಇದೀಗ ಸುಮಾರು ನಾಲ್ಕು ವರ್ಷಗಳ ಬಳಿಕ ನಿರಂತರ ದರ ಏರಿಕೆಗಳು ಕಂಡುಬರುತ್ತಿವೆ.






