ಭರವಸೆಗಳ ಮಹಾಪೂರ: ದೆಹಲಿ ಹೊಸ ಸರ್ಕಾರದ ಮುಂದಿದೆ ದೊಡ್ಡ ಸವಾಲು

PC: x.com/narendramodi
ಹೊಸದಿಲ್ಲಿ: ಮೂರು ದಶಕಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಮರಳಿ ಪಡೆದಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಹೊಸ ಸರ್ಕಾರಕ್ಕೆ ದುಬಾರಿಯಾಗಿ ಪರಿಣಮಿಸಲಿವೆ.
ಚುನಾವಣಾ ಮೇಲಾಟ ಮುಗಿದ ಬಳಿಕ ಇದೀಗ ನಿಜವಾಗಿಯೂ 'ಉಚಿತ'ಗಳನ್ನು ಈಡೇರಿಸುವುದು ಸವಾಲುದಾಯಕ ಕಾರ್ಯ. ಕರ್ನಾಟಕ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಇದಕ್ಕೆ ದಾರಿ ಕಂಡುಕೊಂಡಿವೆ. ಇದೀಗ ದೆಹಲಿಯ ಹೊಸ ಸರ್ಕಾರಕ್ಕೆ ಸವಾಲು ಎದುರಾಗಿದೆ.
ಕೇಜ್ರಿವಾಲ್ ಅವರ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮೀರುವ ಹಲವು ಮಹತ್ವಾಕಾಂಕ್ಷಿ ಭರವಸೆಗಳನ್ನು ಬಿಜೆಪಿ ಚುನಾವಣೆ ಸಂದರ್ಭದಲ್ಲಿ ನೀಡಿತ್ತು. ಬೊಕ್ಕಸಕ್ಕೆ ಹೊರೆಯಾಗುವ ಪ್ರಮುಖ ಯೋಜನೆಗಳೆಂದರೆ, ಪ್ರತಿ ಮಹಿಳೆಯರಿಗೆ ಮಾಸಿಕ 2500 ರೂಪಾಯಿಗಳನ್ನು ನೀಡುವುದು ಹಾಗೂ ಹಿರಿಯ ನಾಗರಿಕರಿಗೆ 2500 ರೂಪಾಯಿ ಮಾಸಿಕ ಪಿಂಚಣಿ ನೀಡುವುದು. ಇದರಲ್ಲೂ 70 ವರ್ಷ ದಾಟಿವರಿಗೆ 3000 ರೂಪಾಯಿ ನೀಡುವ ಭರವಸೆ ನೀಡಲಾಗಿದೆ. ಇದರ ಜತೆಗೆ ನಿರೀಕ್ಷಿತ ತಾಯಂದಿರಿಗೆ 21 ಸಾವಿರ ರೂಪಾಯಿ ಹಾಗೂ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಆಶ್ವಾಸನೆಯನ್ನೂ ನೀಡಿದೆ.
ರಾಜ್ಯದ ಇತ್ತೀಚಿನ ಆದಾಯ ಮತ್ತು ಖರ್ಚಿನ ಅಂದಾಜನ್ನು ನೋಡಿದರೆ ಈ ಯೋಜನೆಗಳಿಗೆ ಹಣ ಹೊಂದಿಸುವುದು ನಿಜಕ್ಕೂ ಕಷ್ಟಸಾಧ್ಯ. ದೆಹಲಿ ಸರ್ಕಾರ 2024-25ರಲ್ಲಿ 58,750 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಿದ್ದು, ಕಳೆದ ವರ್ಷ 53,680 ಕೋಟಿ ರೂಪಾಯಿ ಆದಾಯ ಬಂದಿದೆ.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 76 ಸಾವಿರ ಕೋಟಿ ಅಂದಾಜು ವೆಚ್ಚದ ನಿರೀಕ್ಷೆಯಿದ್ದು, ಶೇಕಡ 22ರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ. ಎಎಪಿ ಆಡಳಿತದಲ್ಲಿ ಶಿಕ್ಷಣಕ್ಕೆ 16,396 ಕೋಟಿ, ನಗರಾಭಿವೃದ್ಧಿ ಮತ್ತು ಗೃಹನಿರ್ಮಾಣಕ್ಕೆ 9800 ಕೋಟಿ ರೂಪಾಯಿ (ಶೇಕಡ 13), ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ 8685 ಕೋಟಿ, (ಶೇಕಡ 11), ಸಾರಿಗೆ ಮೂಲಸೌಕರ್ಯಕ್ಕೆ 7470 ಕೋಟಿ (10%), ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ 7195 ಕೋಟಿ (9%) ಮತ್ತು ಸಾಮಾಜಿಕ ಭದ್ರತೆಗೆ 6694 ಕೋಟಿ (9%) ನಿಗದಿಪಡಿಸಲಾಗಿತ್ತು.
ಮೂರನೇ ಎರಡರಷ್ಟು ವೆಚ್ಚ ವೇತನ ಹಾಗೂ ಸಾಂಸ್ಥಿಕ ವೆಚ್ಚಕ್ಕೆ ಖರ್ಚಾಗಲಿದೆ. ತೆರಿಗೆ, ತೆರಿಗೆಯೇತರ ಮೂಲ ಹಾಗೂ ಕೇಂದ್ರೀಯ ಸ್ವೀಕೃತಿಗಳಿಂದ ಬರುವ ಆದಾಯ 64,142 ಕೋಟಿಯಿಂದ 62415 ಕೋಟಿಗೆ ಇಳಿಕೆಯಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ.
ಮಹಿಳೆಯರಿಗೆ ಮಾಸಿಕ 2500 ರೂಪಾಯಿ ನೀಡುವುದು ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದ್ದು, ಇದಕ್ಕೆ 11 ಸಾವಿರ ಕೋಟಿ ವೆಚ್ಚವಾಗಲಿದೆ. ಪಿಂಚಣಿಗೆ 4100 ಕೋಟಿ ಹಾಗೂ ಯಮುನಾ ನದಿ ಸ್ವಚ್ಛತೆಗೆ 8000 ಕೋಟಿಯನ್ನು ಎಲ್ಲಿಂದ ಹೊಂದಿಸುವುದು ಎನ್ನುವುದೇ ನೂತನ ಸರ್ಕಾರಕ್ಕೆ ತಲೆನೋವು ತರಲಿದೆ.







