ಜಿ20 ಶೃಂಗಸಭೆ: ಮಾದಕವಸ್ತು, ಉಗ್ರರ ಸಂಪರ್ಕ ವಿರುದ್ಧ ಹೋರಾಟಕ್ಕೆ ಮೋದಿ ಕರೆ

PC: x.com/timesofindia
ಜೋಹಾನ್ಸ್ಬರ್ಗ್: ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುಸ್ಥಿರ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯ ಪ್ರಗತಿಗೆ ಕರೆ ನೀಡಿದ್ದಾರೆ. ಜತೆಗೆ ಉಗ್ರರು ಮತ್ತು ಮಾದಕವಸ್ತು ಜಾಲದ ಸಂಪರ್ಕ ವಿರುದ್ಧ ಸಂಯೋಜಿತ ಹೋರಾಟ ಸೇರಿದಂತೆ ನಾಲ್ಕು ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.
ಮಾದಕವಸ್ತುಗಳ ಕಳ್ಳಸಾಗಣೆ ಕೇವಲ ಸಾರ್ವಜನಿಕ ಆರೋಗ್ಯ, ಸುಸ್ಥಿರ ಅಭಿವೃದ್ಧಿ ಮತ್ತ ಭದ್ರತೆಗೆ ಅಪಾಯ ಮಾತ್ರವಲ್ಲದೇ ಉಗ್ರರಿಗೆ ಹಣಕಾಸು ನೆರವು ಒದಗಿಸುವ ಮೂಲ ಎಂದು ಮೋದಿ ವಿಶ್ಲೇಷಿಸಿದರು.
ಪ್ರಗತಿಯ ಮಾನದಂಡಗಳ ಮರುಪರಿಶೀಲನೆಗೆ ಒತ್ತು ನೀಡುವಂತೆ ಸಲಹೆ ನೀಡಿದ ಅವರು, ಹಾಲಿ ಇರುವ ಚೌಕಟ್ಟು ಸಂಪನ್ಮೂಲಗಳಿಂದ ವಂಚಿತವಾದ ದೊಡ್ಡ ಜನವರ್ಗವನ್ನು ಹೊರಗಿಟ್ಟಿದೆ ಹಾಗೂ ಇದು ಪ್ರಕೃತಿಯ ಶೋಷಣೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಹೊಸದಿಲ್ಲಿಯಲ್ಲಿ ಎರಡು ವರ್ಷ ಹಿಂದೆ ನಡೆದ ಶೃಂಗಸಭೆಯಲ್ಲಿ ಜಿ20 ಕೂಟಕ್ಕೆ ಆಫ್ರಿಕನ್ ಒಕ್ಕೂಟವನ್ನು ಕಾಯಂ ಸದಸ್ಯರಾಗಿ ಸೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮೋದಿಯವರು, ದೋಷಪೂರಿತ ಪ್ರಗತಿ ಆದ್ಯತೆಯ ಕಾರಣದಿಂದ ಇಡೀ ಖಂಡ ಸಾಕಷ್ಟು ಸಂಕಷ್ಟ ಅನುಭವಿಸಿದೆ. "ಇಂದು ಮೊಟ್ಟಮೊದಲ ಬಾರಿಗೆ ಆಫ್ರಿಕಾ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿರುವ ಸಂದರ್ಭದಲ್ಲಿ ನಾವು ಅಭಿವೃದ್ಧಿ ಮಾನದಂಡಗಳನ್ನು ಮರು ಪರಿಶೀಲಿಸುವ ಅನಿವಾರ್ಯತೆ ಇದೆ" ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ತತ್ವ ಎನಿಸಿದ 'ಅಂತರ್ಗತ ಮಾನವೀಯತೆ'ಯನ್ನು ಪ್ರತಿಪಾದಿಸಿದ ಅವರು, "ನಾವು ವ್ಯಕ್ತಿ, ಸಮಾಜ ಮತ್ತು ಪರಿಸರವನ್ನು ಸಮಗ್ರವಾಗಿ ಅಂತರ್ಗತವಾಗಿದೆ ಎಂದು ಭಾವಿಸಬೇಕು. ಆಗ ಮಾತ್ರ ನಾವು ಪ್ರಗತಿ ಮತ್ತು ಪರಿಸರದ ನಡುವೆ ನೈಜ ಸಮನ್ವಯ ಸಾಧಿಸಲು ಸಾಧ್ಯ" ಎಂದು ಪ್ರತಿಪಾದಿಸಿದರು.







