ಗುಂಪು ಥಳಿತ, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಗರಿಷ್ಠ ಶಿಕ್ಷೆ: ಹಲವು ಕ್ರಿಮಿನಲ್ ಕಾನೂನುಗಳಿಗೆ ಮಹತ್ತರ ಮಾರ್ಪಾಟು

ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಬ್ರಿಟಿಷರ ಕಾಲದ ಹಲವು ಕ್ರಿಮಿನಲ್ ಕಾನೂನುಗಳಲ್ಲಿ ಮಹತ್ತರ ಮಾರ್ಪಾಟುಗಳನ್ನು ಇಂದು ಕೇಂದ್ರ ಸರ್ಕಾರ ಘೋಷಿಸಿದೆ. ಗುಂಪು ಥಳಿತ ಮತ್ತು ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಗರಿಷ್ಠ ಶಿಕ್ಷೆ ಮತ್ತು ದೇಶದ್ರೋಹದ ಕಾನೂನಿನ ಬದಲು “ಏಕತೆಗೆ ಅಪಾಯವೊಡ್ಡುವ” ಅಪರಾಧ ಎಂದು ಹೆಸರಿಸಲಾಗಿದೆ.
1860ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತ ಎಂದು ಹೆಸರಿಸಲಾಗಿದೆ ಎಂದು ಮೂರು ಮಸೂದೆ ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕ್ರಿಮಿನಲ್ ದಂಡ ಸಂಹಿತೆಯ ಬದಲು ಇನ್ನು ಭಾರತೀಯ ನಾಗರಿಕ್ ಸುರಕ್ಷಾ ಸಂಹಿತ ಇರಲಿದೆ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲು ಭಾರತೀಯ ಸಾಕ್ಷ್ಯ ಕಾಯಿದೆ ಇರಲಿದೆ.
ಎಲ್ಲಾ ಮೂರು ಮಸೂದೆಗಳನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿ ಮುಂದೆ ಇರಿಸಲಾಗಿದೆ. ಪರಿಷ್ಕೃತ ಕಾನೂನುಗಳಲ್ಲಿ ಸಶಸ್ತ್ರ ಬಂಡಾಯ, ದುರುದ್ದೇಶಿತ ಚಟುವಟಿಕೆಗಳು, ಪ್ರತ್ಯೇಕತಾವಾದ ಚಟುವಟಿಕೆಗಳು ಅಥವಾ ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಭಂಗ ತರುವ ಚಟುವಟಿಕೆಗಳನ್ನೂ ಪರಿಷ್ಕೃತ ಕಾನೂನುಗಳಲ್ಲಿ ಸೇರಿಸಲಾಗಿದೆ.
ಮೊದಲ ಬಾರಿಗೆ ಸಣ್ಣ ಪುಟ್ಟ ಅಪರಾಧಗಳಿಗೆ ಸಮುದಾಯ ಸೇವೆಯ ಶಿಕ್ಷೆಯನ್ನು ಪರಿಚಯಿಸಲಾಗಿದೆ. ಪ್ರಸ್ತಾವಿತ ಕಾನೂನಿನ ಪ್ರಕಾರ ಬಂಧನವನ್ನು ತಪ್ಪಿಸಿಕೊಳ್ಳುವವರ ವಿಚಾರಣೆಯನ್ನು ಅವರ ಅನುಪಸ್ಥಿತಿಯಲ್ಲಿ ನಡೆಸಲು ಅನುಮತಿಸುವುದು.
ಪೊಲೀಸರು ಎಫ್ಐಆರ್ ಗಳನ್ನು 90 ದಿನಗಳೊಳಗೆ ಸಲ್ಲಿಸಬೇಕು ಹಾಗೂ ಇ-ಎಫ್ಐಆರ್ ಅನ್ನು ಎಲ್ಲಿಂದಲಾದರೂ ದಾಖಲಿಸಬಹುದು. ಶೋಧ ಮತ್ತು ಚಲ್ಲನ್ (ಪ್ರಾಸಿಕ್ಯೂಶನ್) ಪ್ರಕ್ರಿಯೆಯನ್ನು ಚಿತ್ರೀಕರಣ ನಡೆಸಬೇಕು ಎಂದು ಪ್ರಸ್ತಾವಿತ ಕಾನೂನು ತಿಳಿಸುತ್ತದೆ.
ಮತದಾನದ ಸಮಯ ಮತದಾರರಿಗೆ ಲಂಚ ನೀಡುವವರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ಪ್ರಸ್ತಾಪಿಸಲಾಗಿದೆ.
ಅಷ್ಟೇ ಅಲ್ಲದೆ ಅಪರಾಧಗಳನ್ನು ಲಿಂಗ ತಟಸ್ಥಗೊಳಿಸಲಾಗಿದೆ, ಸಂಘಟಿತ ಅಪರಾಧ ಮತ್ತು ಉಗ್ರವಾದ ಚಟುವಟಿಕೆಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಉಗ್ರವಾದಿ ಕೃತ್ಯಗಳು ಮತ್ತು ಸಂಘಟಿತ ಅಪರಾಧ ಎಂಬ ಹೊಸ ಅಪರಾಧಗಳನ್ನೂ ಸೇರಿಸಲಾಗಿದೆ.
ವಿವಿಧ ಅಪರಾಧಗಳಿಗೆ ದಂಡ ಮತ್ತು ಶಿಕ್ಷೆ ಕೂಡ ಏರಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ದೋಷಿಗಳಿಗೆ 20 ವರ್ಷ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಪ್ರಸ್ತಾವಿತ ಮಾರ್ಪಾಟುಗಳು ತಿಳಿಸುತ್ತವೆ.
ದೇಶದ್ರೋಹ ಕಾನೂನು ರದ್ದು
ದೇಶದ್ರೋಹ ಕಾನೂನನ್ನು “ಸಂಪೂರ್ಣವಾಗಿ ರದ್ದುಪಡಿಸಲಾಗುವುದು” ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಹೇಳಿದರು.
ಅಪರಾಧ ನ್ಯಾಯ ವ್ಯವಸ್ಥೆಯ ಸಂಪೂರ್ಣ ಪುನರ್ರಚನೆಯ ಉದ್ದೇಶದ ಮೂರು ಮಸೂದೆಗಳನ್ನು ಸಂಸತ್ ನಲ್ಲಿ ಮಂಡಿಸಿದ ಬಳಿಕ ಅಮಿತ್ ಶಾ ಮಾತನಾಡುತ್ತಿದ್ದರು. ಆದರೆ, ರದ್ದುಪಡಿಸಲು ಉದ್ದೇಶಿಸಲಾಗಿರುವ ದೇಶದ್ರೋಹ ಕಾನೂನಿನ ವಿಧಿಗಳನ್ನು ಭಾರತೀಯ ನ್ಯಾಯ ಸಂಹಿತೆಯ 150ನೇ ವಿಧಿಯಲ್ಲಿ ಉಳಿಸಿಕೊಳ್ಳಲಾಗಿದೆ.
ವಿಭಜನೆ, ಸಶಸ್ತ್ರ ಬಂಡಾಯ, ಬುಡಮೇಲು ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಹಾಗೂ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಅಪಾಯಕ್ಕೆ ಗುರಿಪಡಿಸುವ ಕೃತ್ಯಗಳನ್ನು ಈಗ ನೂತನ ಕಾನೂನುಗಳಲ್ಲಿ ಅಪರಾಧವಾಗಿಸಲಾಗಿದೆ.
ಹಾಲಿ ದೇಶದ್ರೋಹ ಕಾನೂನಿನ ಪ್ರಕಾರ, ಆರೋಪಿಗೆ ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ನೂತನ ಕಾನೂನುಗಳಲ್ಲಿ, ಮೂರು ವರ್ಷದ ಜೈಲಿನ ಅವಧಿಯನ್ನು 7 ವರ್ಷಗಳಿಗೆ ವಿಸ್ತರಿಸಲಾಗಿದೆ.
‘‘ಎಲ್ಲರಿಗೂ ಮಾತನಾಡುವ ಹಕ್ಕಿದೆ. ನಾವು ದೇಶದ್ರೋಹ ಕಾನೂನನನ್ನು ಸಂಪೂರ್ಣವಾಗಿ ರದ್ದುಪಡಿಸುತ್ತಿದ್ದೇವೆ’’ ಎಂದು ಸಂಸತ್ ನಲ್ಲಿ ನೂತನ ಮಸೂದೆಗಳನ್ನು ಮಂಡಿಸಿದ ಗೃಹ ಸಚಿವರು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ‘ದೇಶದ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ನೂತನ ಮಸೂದೆಯು ಆದ್ಯತೆ ನೀಡುತ್ತದೆ.
ಶಿಕ್ಷೆಯಾಗಿ ಸಮುದಾಯ ಸೇವೆ
ಮೊದಲ ಬಾರಿಗೆ, ಸಮುದಾಯ ಸೇವೆಯು ಸಣ್ಣ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಗಳ ಪೈಕಿ ಒಂದಾಗಿರುತ್ತದೆ. ತಲೆತಪ್ಪಿಸಿಕೊಂಡಿರುವ ಆರೋಪಿಗಳನ್ನು ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಪಸ್ತಾಪಿತ ಕಾನೂನು ಅವಕಾಶ ನೀಡುತ್ತದೆ.
ಪೊಲೀಸರು ಎಫ್ಐಆರ್ಗಳನ್ನು 90 ದಿನಗಳ ಒಳಗೆ ಪರಿಷ್ಕರಿಸಬೇಕು ಹಾಗೂ ಇ-ಎಫ್ಐಆರ್ ಗಳನ್ನು ಎಲ್ಲಿಂದಲೂ ದಾಖಲಿಸಬಹುದಾಗಿದೆ. ಚುನಾವಣೆಗಳ ವೇಳೆ, ಮತದಾರರಿಗೆ ಲಂಚ ನೀಡುವವರಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ನೀಡುವ ಪ್ರಸ್ತಾವವನ್ನೂ ಮಸೂದೆ ಹೊಂದಿದೆ.
ಶಿಕ್ಷೆ, ದಂಡದ ಪ್ರಮಾಣದಲ್ಲಿ ಹೆಚ್ಚಳ
ಪ್ರಸ್ತಾಪಿತ ಕಾನೂನುಗಳಲ್ಲಿ, ವಿವಿಧ ಅಪರಾಧಗಳ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷ ಅಥವಾ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ನೂತನ ಕಾನೂನುಗಳಲ್ಲಿ ಮರಣ ದಂಡನೆಯನ್ನು ಉಳಿಸಿಕೊಳ್ಳಲಾಗಿದೆ.
ನೂತನ ಕಾನೂನುಗಳ ಉದ್ದೇಶ ಶಿಕ್ಷಿಸುವುದಲ್ಲ, ನ್ಯಾಯ ನೀಡುವುದು: ಶಾ
ಈಗ ರದ್ದುಪಡಿಸಲಾಗುತ್ತಿರುವ ಕಾನೂನುಗಳು ಬ್ರಿಟಿಶರು ಮಾಡಿರುವ ಕಾನೂನುಗಳಾಗಿವೆ ಎಂದು ಗೃಹ ಸಚಿವರ ಅಮಿತ್ ಶಾ ಹೇಳಿದರು.
‘‘ಆ ಕಾನೂನುಗಳ ಗುರಿ ಬ್ರಿಟಿಶ್ ಆಡಳಿತವನ್ನು ರಕ್ಷಿಸಿ ಬಲಪಡಿಸುವುದಾಗಿತ್ತು. ಅವುಗಳ ಹಿಂದಿನ ಕಲ್ಪನೆ ಶಿಕ್ಷಿಸುವುದಾಗಿತ್ತೇ ಹೊರತು, ನ್ಯಾಯ ನೀಡುವುದಾಗಿರಲಿಲ್ಲ. ಈಗ ಅವುಗಳ ಸ್ಥಾನದಲ್ಲಿ ಬರುತ್ತಿರುವ ಮೂರು ನೂತನ ಕಾನೂನುಗಳು, ಭಾರತೀಯ ನಾಗರಿಕನ ಹಕ್ಕುಗಳನ್ನು ರಕ್ಷಿಸಬೇಕು ಎನ್ನುವ ಧೋರಣೆಯನ್ನು ಹೊಂದಿವೆ’’ ಎಂದು ಅವರು ಹೇಳಿದರು.
‘‘ಉದ್ದೇಶ ಶಿಕ್ಷಿಸುವುದಲ್ಲ, ನ್ಯಾಯವನ್ನು ನೀಡುವುದು. ಅಪರಾಧವನ್ನು ನಿಲ್ಲಿಸಬೇಕು ಎನ್ನುವ ಭಾವನೆಯನ್ನು ಸೃಷ್ಟಿಸಲು ಶಿಕ್ಷೆ ಕೊಡಲಾಗುತ್ತದೆ’’ ಎಂದರು.







