ಅಸ್ಸಾಂನಲ್ಲಿ ಮಹಾಬಲ ಸಿಮೆಂಟ್ ಗೆ ಇಡೀ 'ಜಿಲ್ಲೆ' ದಾನವಾಗಿ ನೀಡಲಾಗಿದೆಯೇ? ಇದೇನು ತಮಾಷೆಯೇ?: ಆಕ್ರೋಶ ವ್ಯಕ್ತಪಡಿಸಿದ ಗುವಾಹಟಿ ಹೈಕೋರ್ಟ್

ಗುವಾಹಟಿ ಹೈಕೋರ್ಟ್ | PC : ghcazlbench.nic.in
ಗುವಾಹಟಿ: ಅಸ್ಸಾಂನ ಬಿಜೆಪಿ ಸರ್ಕಾರವು ಮಹಾಬಲ ಸಿಮೆಂಟ್ ಗೆ ಸುಮಾರು ಒಂದು ಸಾವಿರ ಎಕರೆ ಭೂಮಿಯನ್ನು ಒಂದು ಸಿಮೆಂಟ್ ಫ್ಯಾಕ್ಟರಿಗಾಗಿ ಧಾರೆ ಎರೆದಿರುವುದು ಕೇವಲ ಒಂದು ವ್ಯವಹಾರವಾಗಿ ಉಳಿದಿಲ್ಲ, ಇದು ಪ್ರಜಾಪ್ರಭುತ್ವದ ಅಣಕವಾಗಿದೆ. ಈ ನಿರ್ಧಾರದ ಕುರಿತು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ, "ಇದೇನು ತಮಾಷೆಯೇ?" ಎಂದು ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣವೇನು?
ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು, ಮಹಾಬಲ ಸಿಮೆಂಟ್ ಗೆ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲು ಬರೋಬ್ಬರಿ 3,000 ಬಿಘಾ ಭೂಮಿಯನ್ನು ನೀಡಲು ನಿರ್ಧರಿಸಿದೆ. 3,000 ಬಿಘಾ ಎಂದರೆ ಸುಮಾರು ಒಂದು ಸಾವಿರ ಎಕರೆ ಭೂಮಿ! ಇದೊಂದು ಸಣ್ಣ ಹಳ್ಳಿಯಲ್ಲ, ಇದೊಂದು ಸಣ್ಣ ಪಟ್ಟಣದಷ್ಟು ವಿಶಾಲವಾದ ಪ್ರದೇಶ. ಇದೊಂದು ಕೇವಲ ಒಂದು ಭೂ ಹಂಚಿಕೆಯಲ್ಲ, ಇದೊಂದು ಹಿಂದಿನ ಕಾಲದಲ್ಲಿ ರಾಜರು ಒಂದಿಡೀ ಊರನ್ನೇ ಬಳುವಳಿಯಾಗಿ ನೀಡಿದಂತೆ.
ಈ ಪ್ರಕರಣ ಗುವಾಹಟಿ ಹೈಕೋರ್ಟ್ ಮೆಟ್ಟಿಲೇರಿದಾಗ, ನ್ಯಾಯಮೂರ್ತಿಗಳು ಸರ್ಕಾರದ ನಿರ್ಧಾರವನ್ನು ಕಂಡು ದಂಗಾದರು. ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರು ಸರ್ಕಾರದ ವಕೀಲರನ್ನು ಕೇಳಿದ ಪ್ರಶ್ನೆಯ ವೀಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ .
ಅವರು ಆಶ್ಚರ್ಯ ಮತ್ತು ಆಕ್ರೋಶದಿಂದ, "ಇದೇನು ತಮಾಷೆಯೇ? ನೀವು ಇಡೀ ಜಿಲ್ಲೆಯನ್ನೇ ಕೊಡುತ್ತಿದ್ದೀರಿ. ನಿಮ್ಮ ಅಗತ್ಯ ಮುಖ್ಯವಲ್ಲ, ಸಾರ್ವಜನಿಕ ಹಿತಾಸಕ್ತಿಯೇ ಇಲ್ಲಿ ಮುಖ್ಯ," ಎಂದು ಖಡಕ್ ಮಾತುಗಳಲ್ಲಿ ಹೇಳಿದ್ದಾರೆ.
ಉನ್ನತ ನ್ಯಾಯಾಂಗವೇ ಒಂದು ಸರ್ಕಾರದ ನಿರ್ಧಾರವನ್ನು "ಜೋಕ್" ಎಂದು ಕರೆದಿದೆ. ಈ ವಿಷಯ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದು 'ಆಪ್ತ ಬಂಡವಾಳಶಾಹಿ'(crony capitalism)ಯ ನಾಚಿಕೆಗೇಡು ಉದಾಹರಣೆ ಎಂದು ಜರಿದಿದೆ.
ಒಂದೆಡೆ, 'ಅಕ್ರಮ ಒತ್ತುವರಿ' ಎಂಬ ಹೆಸರಿನಲ್ಲಿ ವಿಶ್ವನಾಥ್ ಜಿಲ್ಲೆಯಲ್ಲಿ ಕೇವಲ 55 ಎಕರೆ ಜಾಗದಲ್ಲಿದ್ದ ನೂರಾರು ಭೂಹೀನ, ಬಡ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಒಕ್ಕಲೆಬ್ಬಿಸಲಾಗುತ್ತದೆ. ಇನ್ನೊಂದೆಡೆ, ಒಂದೇ ಕಂಪೆನಿಗೆ ಕೋಟ್ಯಂತರ ಚದರ ಅಡಿ ಭೂಮಿಯನ್ನು ಕೆಂಪು ಹಾಸು ಹಾಕಿ ಸ್ವಾಗತಿಸಿ ನೀಡಲಾಗುತ್ತದೆ.
ಈ ಪ್ರಕರಣ ಕೇವಲ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಅಸ್ಸಾಂನ ಪ್ರತಿ ಇಂಚು ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸುವುದಾಗಿ ಹೇಳುತ್ತಾರೆ. ಆದರೆ ಆ ಕಾನೂನು ಕೇವಲ ಬಡವರಿಗೇ ಮಾತ್ರವೇ ? ಶ್ರೀಮಂತರು ಸಾಮ್ರಾಜ್ಯಗಳನ್ನೇ ಕಬಳಿಸಿದಾಗ ಈ ಕಾನೂನು ಎಲ್ಲಿ ಹೋಗುತ್ತದೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಹಲವರು ಇದನ್ನು ಹಿಮಂತ ಬಿಸ್ವಾ ಶರ್ಮಾ ಅವರ ದುರಹಂಕಾರ ಮತ್ತು ಕಾರ್ಪೊರೇಟ್ ಗುಲಾಮಗಿರಿ ಎಂದು ಟೀಕಿಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವುದು ಹಗಲು ದರೋಡೆ. ಬಡವರನ್ನು ಒಕ್ಕಲೆಬ್ಬಿಸಿ, ಶ್ರೀಮಂತರಿಗೆ ಕೆಂಪು ಹಾಸು ಹಾಸಲಾಗುತ್ತಿದೆ. ಇದೇನಾ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದರೆ? ವಿಕಾಸ ಕೇವಲ ಉದ್ಯಮಿಗಳಿಗೆ ಮಾತ್ರ ಸೀಮಿತವೇ? ಎಂಬ ಚರ್ಚೆಗಳು ಜೋರಾಗಿವೆ.
ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದು ಕೇವಲ ಕೆಟ್ಟ ಆಡಳಿತವಲ್ಲ, ಇದು ಜನರ ನಂಬಿಕೆಗೆ ಮಾಡಿದ ದ್ರೋಹ, ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಜೈಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅಸ್ಸಾಂನ ಈ ಘಟನೆ ಕೇವಲ ಒಂದು ರಾಜ್ಯದ ಭೂ ಹಗರಣವಲ್ಲ. ಇದು ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಪ್ರಶ್ನಿಸುವಂತಿದೆ. ಚುನಾಯಿತ ಸರ್ಕಾರಗಳು ಸಾರ್ವಜನಿಕ ಸಂಪನ್ಮೂಲಗಳ ರಕ್ಷಕರೇ ಹೊರತು ಮಾಲೀಕರಲ್ಲ. ನ್ಯಾಯಾಲಯವೇ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ, ಆಡಳಿತದ ಚುಕ್ಕಾಣಿ ಹಿಡಿದವರು ದಾರಿ ತಪ್ಪಿದ್ದಾರೆ ಎಂದೇ ಅರ್ಥ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, "ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 3,000 ಬಿಘಾ ಅಂದ್ರೆ 8.1 ಕೋಟಿ ಚದರ ಅಡಿ ಬುಡಕಟ್ಟು ಜನಾಂಗದ ಭೂಮಿಯನ್ನು ಅದಾನಿ ಸಿಮೆಂಟ್ ಕಾರ್ಖಾನೆಗಾಗಿ ಹಸ್ತಾಂತರಿಸಿದೆ ಎಂದು ಹೇಳಿತ್ತು. ಆದರೆ ವಾಸ್ತವಾಗಿ ಅದು ಮಹಾಬಲ ಸಿಮೆಂಟ್ ಕಂಪೆನಿಗೆ ಭೂಮಿ ಹಸ್ತಾಂತರಿಸಿದ ಪ್ರಕರಣ.
ಈ ಕುರಿತು ಸ್ಪಷ್ಟನೆ ನೀಡಿರುವ ಅದಾನಿ ಸಮೂಹವು, ನಮಗೂ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.







