ಪವನ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಗುವಾಹಟಿ ಹೈಕೋರ್ಟ್

PC : The Hindu
ಗುವಾಹಟಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಬಹು ಪಾಸ್ಪೋರ್ಟ್ ಹಾಗೂ ವಿದೇಶಿ ಆಸ್ತಿಗಳನ್ನೂ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದ ಖೇರಾ ವಿರುದ್ಧ ಅಸ್ಸಾಂ ಪೊಲೀಸ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪವನ್ ಖೇರಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ಮೇಲಿನ ಆದೇಶವನ್ನು ಎ. 21ರಂದು ನ್ಯಾಯಾಲಯ ಕಾಯ್ದಿರಿಸಿತ್ತು.
ಎ.4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಖೇರಾ ಅವರು ರಿನಿಕಿ ಭುಯಾನ್ ಶರ್ಮಾ ವಿವಿಧ ದೇಶಗಳಿಂದ ನೀಡಲಾದ ಮೂರು ಪಾಸ್ಪೋರ್ಟ್ ಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಎಪ್ರಿಲ್ 5ರಂದು ಗುವಾಹಟಿ ಅಪರಾಧ ವಿಭಾಗವು ಎಫ್ಐಆರ್ ದಾಖಲಿಸಿತ್ತು. ಬಳಿಕ ಏಪ್ರಿಲ್ 7ರಂದು ಖೇರಾ ಅವರ ದಿಲ್ಲಿ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.
ಈ ಎಫ್ಐಆರ್ ‘ರಾಜಕೀಯ ದ್ವೇಷದಿಂದ ಪ್ರೇರಿತ’ವಾಗಿದ್ದು, ತಮ್ಮನ್ನು ಮೌನಗೊಳಿಸಲು ನಡೆಸುತ್ತಿರುವ ಕ್ರಮ ಎಂದು ಖೇರಾ ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ತೆಲಂಗಾಣ ಹೈಕೋರ್ಟ್ನ ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನೂ ಪ್ರಶ್ನಿಸಿದ್ದರು.






