ಗಾಝಾ | ಇಸ್ರೇಲ್ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆದ ಮಕ್ಕಳು

Photo Credits: AP
ಗಾಝಾ ಪಟ್ಟಿ: ವಿಶ್ವವಿದ್ಯಾನಿಲಯ ಅಧ್ಯಯನಕ್ಕೆ ಪ್ರವೇಶಾತಿಗೆ ಯುದ್ಧದಲ್ಲಿ ವಿನಾಶಗೊಂಡಿರುವ ಗಾಝಾ ಪಟ್ಟಿಯ ಶಿಕ್ಷಣ ಸಚಿವಾಲಯ ಆಯೋಜಿಸಿರುವ ಅಂತಿಮ ಹಂತದ ಪ್ರೌಢ ಶಿಕ್ಷಣ ಪರೀಕ್ಷೆಗೆ ನೂರಾರು ಫೆಲೆಸ್ತೀನ್ ವಿದ್ಯಾರ್ಥಿಗಳು ಹಾಜರಾಗಿದ್ದರು.
ಈ ತಿಂಗಳ ಆರಂಭದಲ್ಲಿ ಫೆಲೆಸ್ತೀನ್ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ಪ್ರಕಟಿಸಿತ್ತು. ಅಕ್ಟೋಬರ್ 2023 ರಿಂದ ಗಾಝಾ ಮೇಲೆ ಇಸ್ರೇಲ್ ಜನಾಂಗೀಯ ಯುದ್ಧ ಪ್ರಾರಂಭವಾದಾಗಿನಿಂದ ನಡೆಯುತ್ತಿರುವ ಮೊಟ್ಟ ಮೊದಲ ಮಹತ್ವದ ಪರೀಕ್ಷೆ ಇದಾಗಿದೆ.
ಪರೀಕ್ಷೆಗೆ 1,500 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪರೀಕ್ಷೆಯನ್ನು ವಿಶೇಷ ತಂತ್ರಾಂಶ ಬಳಸಿಕೊಂಡು ವಿದ್ಯುನ್ಮಾನ ಸಾಧನಗಳ ಮೂಲಕ ಆಯೋಜಿಸಲಾಗಿದೆ. ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲ ತಾಂತ್ರಿಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಗಾಝಾ ಪಟ್ಟಿಯ ಶಿಕ್ಷಣ ಸಚಿವಾಲಯ ತಿಳಿಸಿದೆ.
ಕೆಲವು ವಿದ್ಯಾರ್ಥಿಗಳು ಈ ಆನ್ ಲೈನ್ ಪರೀಕ್ಷೆಯನ್ನು ತಮ್ಮ ಮನೆಯಿಂದಲೇ ಬರೆದಿದ್ದು, ಇನ್ನೂ ಕೆಲವರು ಪ್ರತಿ ದಿನ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿರುವುದರಿಂದ, ಸುರಕ್ಷತೆಯ ಹಿನ್ನೆಲೆಯಲ್ಲಿ, ತಾವು ವಾಸಿಸುತ್ತಿರುವ ಪ್ರಾಂತ್ಯವನ್ನು ಆಧರಿಸಿ ತಮ್ಮ ಪರೀಕ್ಷಾ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.





