ಟಿವಿಕೆ ಸಿದ್ಧಾಂತವನ್ನು ಪ್ರಶ್ನಿಸಲು ಡಿಎಂಕೆಗೆ ಯಾವುದೇ ನೈತಿಕತೆಯಿಲ್ಲ: ವಿಜಯ್

ನಟ ವಿಜಯ್ (Screengrab: PTI)
ಚೆನ್ನೈ: ಕರೂರು ಕಾಲ್ತುಳಿತ ಘಟನೆ ನಡೆದು ಎರಡು ತಿಂಗಳ ಬಳಿಕ ವಿಜಯ್ ಅವರು ರವಿವಾರ ತಮಿಳಗ ವೆಟ್ರಿ ಕಳಗಂ ಪಕ್ಷದ ಪ್ರಚಾರವನ್ನು ಪುನರಾರಂಭಿಸಿದ್ದಾರೆ. ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಅವರು ಆಡಳಿತಾರೂಢ ಡಿಎಂಕೆಯನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತು ಟಿವಿಕೆ ಪಕ್ಷದ ಸೈದ್ಧಾಂತಿಕ ಆದ್ಯತೆಗಳನ್ನು ವಿವರಿಸಿದ್ದಾರೆ.
ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ತಿರಂನಲ್ಲಿರುವ ಒಳಾಂಗಣ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಸ್ಥಳೀಯರನ್ನುದ್ದೇಶಿಸಿ ಮಾತನಾಡಿದ ನಟ ವಿಜಯ್, ಆಡಳಿತ ಪಕ್ಷವು ಲೂಟಿ ನಡೆಸುತ್ತಿದೆ ಎಂದು ಡಿಎಂಕೆ ವಿರುದ್ಧ ವಾಗ್ಧಾಳಿಯನ್ನು ನಡೆಸಿದರು. ಮತ್ತು ಕುಟುಂಬ ರಾಜಕೀಯದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು. ಟಿವಿಕೆ ಸಿದ್ಧಾಂತವನ್ನು ಪ್ರಶ್ನಿಸಲು ಡಿಎಂಕೆಗೆ ಯಾವುದೇ ನೈತಿಕತೆಯಿಲ್ಲ ಎಂದು ಹೇಳಿದರು.
ತಮ್ಮ ಹೊಸ ಪಕ್ಷದ ಸೈದ್ಧಾಂತಿಕ ಸ್ಪಷ್ಟತೆಯ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸಿದ ವಿಜಯ್, ಟಿವಿಕೆ ಸಮಾನತೆಯಲ್ಲಿ ಬೇರೂರಿರುವ ದೃಢವಾದ ಸೈದ್ಧಾಂತಿಕ ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ ಎಂದು ಪ್ರತಿಪಾದಿಸಿದ ಅವರು, ಆ ಕಾರ್ಯಸೂಚಿಯ ಭಾಗವಾಗಿ ಜಾತಿಗಣತಿಗಾಗಿ ಪಕ್ಷದ ಬೇಡಿಕೆಯನ್ನು ಉಲ್ಲೇಖಿಸಿದರು.
ನೀಟ್ ಬಗ್ಗೆ ಡಿಎಂಕೆ ನಿಲುವನ್ನು ಅವರು ಟೀಕಿಸಿದರು. ಟಿವಿಕೆ ಪರೀಕ್ಷೆಯನ್ನು ರದ್ದು ಮಾಡುತ್ತೇವೆ ಎಂದು ಬರೀ ಹೇಳಿಕೆಯನ್ನು ನೀಡುವುದಿಲ್ಲ. ನೀಟ್ ಸಮಸ್ಯೆಗೆ ನಿಜವಾದ ಪರಿಹಾರ ಬೇಕಾದರೆ ಸಂವಿಧಾನದ ಅಡಿಯಲ್ಲಿ ಶಿಕ್ಷಣವನ್ನು ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಬದಲಾಯಿಸಬೇಕು. ಈ ನಿಲುವನ್ನು ತಮ್ಮ ಪಕ್ಷವು ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂದು ವಿಜಯ್ ಹೇಳಿದರು.







