ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್; ಜು.1ರಿಂದ ಅಧಿಕಾರ ಸ್ವೀಕಾರ

ಧೀರಜ್ ಸೇಠ್ |Photo Credit : X \ @SpokespersonMoD
ಹೊಸದಿಲ್ಲಿ: ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಿಸಿದೆ.
ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸೇಠ್, ಜುಲೈ 1ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಸೇಠ್ ಅವರನ್ನು ಡಿಸೆಂಬರ್ 1986ರಲ್ಲಿ ಆರ್ಮರ್ಡ್ ಕಾರ್ಪ್ಸ್ ಗೆ ನಿಯೋಜಿಸಲಾಗಿತ್ತು. ಸುಮಾರು ನಾಲ್ಕು ದಶಕಗಳ ಸೇನಾ ಸೇವೆಯಲ್ಲಿ ಅವರು ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ನಿರ್ವಹಣೆ ಕ್ಷೇತ್ರಗಳಲ್ಲಿ ವ್ಯಾಪಕ ಅನುಭವ ಗಳಿಸಿದ್ದಾರೆ.
ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯ ವೃದ್ಧಿ ಹಾಗೂ ಸೇನೆಯ ಆಧುನೀಕರಣಕ್ಕೆ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಹೊಸ ತಂತ್ರಜ್ಞಾನಗಳನ್ನು ಸೇನಾ ಕಾರ್ಯಾಚರಣೆಗಳೊಂದಿಗೆ ಜೋಡಿಸುವಲ್ಲಿ ಮತ್ತು ಭವಿಷ್ಯದ ಯುದ್ಧಭೂಮಿಯ ಅಗತ್ಯಗಳಿಗೆ ಅನುಗುಣವಾಗಿ ಸೇನೆಯ ಸಾಮರ್ಥ್ಯ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಸಜ್ಜಿತ ರೆಜಿಮೆಂಟ್, ಶಸ್ತ್ರಸಜ್ಜಿತ ಬ್ರಿಗೇಡ್ ಹಾಗೂ ದಂಗೆ ನಿಗ್ರಹ ಪಡೆಯ ಕಮಾಂಡರ್ ಆಗಿ ಅವರು ಸೇವೆ ಸಲ್ಲಿಸಿದ್ದಾರೆ. ನಂತರ ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ರಚನೆಗಳಲ್ಲಿ ಒಂದಾದ ‘ಸುದರ್ಶನ ಚಕ್ರ’ ಕಾರ್ಪ್ಸ್ ನ ಕಮಾಂಡರ್ ಆಗಿದ್ದರು.
ಅಲ್ಲದೆ, ದಿಲ್ಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿಯೂ ಕಾರ್ಯನಿರ್ವಹಿಸಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸೇನಾ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದ್ದರು.
ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಬಳಿಕ ಅವರು ಸೌತ್ ವೆಸ್ಟರ್ನ್ ಕಮಾಂಡ್ ಹಾಗೂ ಸದರ್ನ್ ಕಮಾಂಡ್ ಗಳಿಗೆ ಮುಖ್ಯಸ್ಥರಾಗಿದ್ದರು. ಭಾರತೀಯ ಸೇನೆಯ ಎರಡು ಕಾರ್ಯಾಚರಣಾ ಕಮಾಂಡ್ ಗಳಿಗೆ ನೇತೃತ್ವ ವಹಿಸಿದ ಅಪರೂಪದ ಅಧಿಕಾರಿಗಳಲ್ಲಿ ಅವರು ಒಬ್ಬರಾಗಿದ್ದಾರೆ.
ಸೇಠ್ ಅವರು ಹೈಯರ್ ಕಮಾಂಡ್ ಕೋರ್ಸ್ ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಪದವೀಧರರಾಗಿದ್ದು, ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆಯುವ ಪ್ರತಿಷ್ಠಿತ ಕಮಾಂಡ್ ಮತ್ತು ಸ್ಟಾಫ್ ಕೋರ್ಸ್ನಲ್ಲಿಯೂ ಭಾಗವಹಿಸಿದ್ದಾರೆ.
ಜನರಲ್ ಮನೋಜ್ ಪಾಂಡೆ ಅವರಿಂದ 2024ರ ಜೂನ್ನಲ್ಲಿ 30ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಜನರಲ್ ಉಪೇಂದ್ರ ದ್ವಿವೇದಿ ಅವರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ರೇವಾದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಅವರನ್ನು 1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ರೆಜಿಮೆಂಟ್ ಗೆ ನಿಯೋಜಿಸಲಾಗಿತ್ತು.
ಉತ್ತರ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ವಿವಿಧ ಕಮಾಂಡ್ ಹಾಗೂ ಸಿಬ್ಬಂದಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವವನ್ನು ಅವರು ಹೊಂದಿದ್ದಾರೆ. ತಾಂತ್ರಿಕ ಪ್ರಗತಿ ಮತ್ತು ಆಧುನಿಕ ಯುದ್ಧದ ಬದಲಾಗುತ್ತಿರುವ ಸ್ವರೂಪದಿಂದ ಭದ್ರತಾ ಸವಾಲುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅವರು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.






