Uttar Pradesh | ಮುಝಾಫ್ಫರ್ನಗರ್ ದಂಗೆಯ ದೆವ್ವಗಳು ಅಝಂ ಖಾನ್ ರನ್ನು ಕಾಡುತ್ತಿವೆ: ಸಂಜೀವ್ ಬಲ್ಯಾನ್ ವ್ಯಂಗ್ಯ
ರಾಜಕೀಯ ದ್ವೇಷದ ಆರೋಪಗಳನ್ನು ತಳ್ಳಿಹಾಕಿದ ಮಾಜಿ ಕೇಂದ್ರ ಸಚಿವ

ಸಂಜೀವ್ ಬಲ್ಯಾನ್ , ಅಜಮ್ ಖಾನ್ | Photo Credit : TOI
ಹೊಸದಿಲ್ಲಿ: ಮುಝಾಫ್ಫರ್ನಗರ್ ದಂಗೆಯ ದೆವ್ವಗಳು ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ರನ್ನು ಕಾಡುವುದನ್ನು ಮುಂದುವರಿಸಿವೆ. ದಂಗೆಯ ಹೊಣೆಗಾರಿಕೆಯಿಂದ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶ ಸರಕಾರ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಅಝಂ ಖಾನ್ ಆರೋಪಿಸಿರುವ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಸಂಜೀವ್ ಬಲ್ಯಾನ್, "ನಾನು ಅಝಂ ಖಾನ್ ಅವರ ಸಂದರ್ಶನಗಳನ್ನು ಕೇಳಲು ಇಷ್ಟಪಡುತ್ತೇನೆ. ಅವರು ಆಸಕ್ತಿಕರವಾಗಿ ಮಾತನಾಡುತ್ತಾರೆ. ಪದೇ ಪದೇ ತನಗೆ ಹೀಗಾಯಿತು, ಹಾಗಾಯಿತು ಎಂದು ನೋವು ತೋಡಿಕೊಳ್ಳುತ್ತಾರೆ. ಆದರೆ, ಅವರು ನಮಗೆ ಉಂಟುಮಾಡಿದ ನೋವನ್ನು ನೆನಪಿಟ್ಟುಕೊಂಡಂತಿಲ್ಲ" ಎಂದು ಮುಝಾಫ್ಫರ್ ನಗರ್ ನ ಮಾಜಿ ಸಂಸದರೂ ಆಗಿರುವ ಸಂಜೀವ್ ಬಲ್ಯಾನ್ ಹೇಳಿದರು.
"ಅಝಂ ಖಾನ್ ಅವರ ಸೂಚನೆಯ ಮೇರೆಗೆ ಮುಝಾಫ್ಫರ್ನಗರ್ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ 6,250 ಮಂದಿಯನ್ನು ಹೆಸರಿಸಲಾಗಿದೆ. ಇದರ ಬೆನ್ನಲ್ಲೇ ಸಾವಿರಾರು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ" ಎಂದು ಅವರು ಆರೋಪಿಸಿದರು.
"ಮುಝಾಫ್ಫರ್ನಗರ್ ದಂಗೆಯಲ್ಲಿ ಮೃತಪಟ್ಟವರು ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ, ಆ ದಂಗೆಯ ದೆವ್ವಗಳು ಅಝಂ ಖಾನ್ ರನ್ನು ಕಾಡುವುದನ್ನು ಮುಂದುವರಿಸಿವೆ. ಜೈಲಿಗೆ ಕಳುಹಿಸಲ್ಪಟ್ಟವರಲ್ಲಿ ಬಹುತೇಕರು ಹಿಂದೂಗಳು. ಹೀಗಾಗಿ, ಬಹುಶಃ ಅವರು ಕಳೆದ ಹತ್ತು ವರ್ಷಗಳಿಂದ ತಮ್ಮ ಕೃತ್ಯಗಳ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ" ಎಂದು ತಿಳಿಸಿದರು.
ಅಝಂ ಖಾನ್ ಅವರ ರಾಜಕೀಯ ದ್ವೇಷದ ಆರೋಪಗಳನ್ನು ತಳ್ಳಿಹಾಕಿದ ಸಂಜೀವ್ ಬಲ್ಯಾನ್, ಅವರು ಎದುರಿಸುತ್ತಿರುವ ಕಾನೂನು ಕ್ರಮಗಳು ಹಿಂದಿನ ಕೃತ್ಯಗಳ ಪರಿಣಾಮವೇ ಹೊರತು, ರಾಜಕೀಯ ದ್ವೇಷದ ಫಲವಲ್ಲ ಎಂದು ಸ್ಪಷ್ಟಪಡಿಸಿದರು.
2027ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಝಂ ಖಾನ್ ಅವರ ಬಿಡುಗಡೆ ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಅವರ ಬಿಡುಗಡೆಯಿಂದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಮುಸ್ಲಿಂ ಮತಗಳ ಕ್ರೋಡೀಕರಣವಾಗುವ ಸಾಧ್ಯತೆ ಇದೆ. ಆದರೆ, ಬಿಜೆಪಿ ಮುಸ್ಲಿಂ ಮತದಾರರಿಂದ ಗಮನಾರ್ಹ ಬೆಂಬಲವನ್ನೇನೂ ಪಡೆಯುತ್ತಿಲ್ಲ" ಎಂದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಝಂ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.






