ಉತ್ತರಾಖಂಡ | ಚಿರತೆ ದಾಳಿಗೆ ಬಾಲಕಿ ಮೃತ್ಯು: ಬಿಜೆಪಿ ಶಾಸಕನ ಕಾರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Photo: The New Indian Express
ಡೆಹ್ರಾಡೂನ್: ಚಿರತೆ ದಾಳಿಗೆ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯ ಖಂಡುಸೈನ್ ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಸ್ಥಳೀಯ ಬಿಜೆಪಿ ಶಾಸಕನ ಕಾರನ್ನು ಆಕ್ರೋಶಿತ ಗ್ರಾಮಸ್ಥರು ಸುಮಾರು 90 ನಿಮಿಷಗಳ ಕಾಲ ತಡೆಹಿಡಿದಿದ್ದಾರೆ. ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಶಾಸಕ ಕಾರಿನೊಳಗೇ ಉಳಿದಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಉತ್ತರಾಖಂಡದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಗ್ರಾಮಗಳು ಹಾಗೂ ಮನೆಗಳ ಅಂಗಳದಲ್ಲಿಯೂ ಚಿರತೆಗಳ ದಾಳಿ ನಡೆಯುತ್ತಿದೆ. ಖಂಡುಸೈನ್ ಗ್ರಾಮದಲ್ಲಿ ಸಂಜೆ ವೇಳೆ ಮನೆಯ ಅಂಗಳದಲ್ಲಿದ್ದ ಏಳು ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದೆ. ಬಳಿಕ ಬಾಲಕಿಯನ್ನು ಸಮೀಪದ ಪೊದೆಗಳತ್ತ ಎಳೆದೊಯ್ದಿದೆ. ಕುಟುಂಬಸ್ಥರ ಕಿರುಚಾಟ ಕೇಳಿ ಗ್ರಾಮಸ್ಥರು ಧಾವಿಸಿದರಾದರೂ ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಬಿಜೆಪಿ ಶಾಸಕರ ಕಾರನ್ನು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸುತ್ತುವರಿದು ಸರಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಚಿರತೆಗಳ ಹಾವಳಿ ತಡೆಯಲು ಗಸ್ತು ಹೆಚ್ಚಿಸಬೇಕು ಹಾಗೂ ಬೋನುಗಳನ್ನು ಅಳವಡಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ‘ಭರವಸೆಗಳು ಸಾಕಾಗುವುದಿಲ್ಲ. ಚಿರತೆಯನ್ನು ತಕ್ಷಣ ಸೆರೆಹಿಡಿಯಬೇಕು’ ಎಂದು ಒತ್ತಾಯಿಸಿದ್ದಾರೆ.
ದತ್ತಾಂಶದ ಪ್ರಕಾರ, 2000ರ ಜನವರಿಯಿಂದ 2025ರ ಮೇವರೆಗೆ ವನ್ಯಜೀವಿಗಳ ದಾಳಿಗೆ 1,241 ಮಂದಿ ಮೃತಪಟ್ಟಿದ್ದು, ಈ ಪೈಕಿ 539 ಸಾವುಗಳಿಗೆ ಚಿರತೆಗಳ ದಾಳಿಯೇ ಕಾರಣವಾಗಿದೆ.
ಉತ್ತರಾಖಂಡ ಅರಣ್ಯ ಇಲಾಖೆಯ ಮಾಜಿ ಉಪನಿರ್ದೇಶಕ ಹಾಗೂ ವನ್ಯಜೀವಿ ತಜ್ಞ ರಂಗನಾಥ್ ಪಾಂಡೆ ಅವರು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಮೂರು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
2018ರಲ್ಲಿ ಕಾರ್ಬೆಟ್ ಮತ್ತು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 442 ಇದ್ದ ಹುಲಿಗಳ ಸಂಖ್ಯೆ 2023ರಲ್ಲಿ 560ಕ್ಕೂ ಹೆಚ್ಚಾಗಿದೆ. ಇದರಿಂದ ಚಿರತೆಗಳು ಅರಣ್ಯದ ಪ್ರಮುಖ ವಾಸಸ್ಥಾನಗಳಿಂದ ಹೊರಬರುವಂತಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರಾಖಂಡದ ಶೇ 79ರಷ್ಟು ಚಿರತೆಗಳು ಈಗ ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗೆ ವಾಸಿಸುತ್ತಿವೆ ಎಂದು ಅವರು ‘ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.
ಇದರೊಂದಿಗೆ, ಬೆಟ್ಟದ ಹಳ್ಳಿಗಳಿಂದ ಜನರು ವಲಸೆ ಹೋಗುತ್ತಿರುವುದೂ ಸಮಸ್ಯೆಗೆ ಕಾರಣವಾಗಿದೆ. ಜನವಸತಿ ಇಲ್ಲದ ಮನೆಗಳು ಮತ್ತು ಪೊದೆಗಳಿಂದ ಆವೃತವಾದ ಪ್ರದೇಶಗಳು ಚಿರತೆಗಳಿಗೆ ಆಶ್ರಯ ತಾಣಗಳಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಚಿರತೆಗಳಿರುವ ಪೌರಿ ಜಿಲ್ಲೆ ಈ ಸಮಸ್ಯೆಯಿಂದ ಹೆಚ್ಚು ಬಾಧಿತವಾಗಿದೆ. ಪೌರಿ, ಅಲ್ಮೋರಾ, ತೆಹ್ರಿ ಮತ್ತು ನೈನಿತಾಲ್ ಜಿಲ್ಲೆಗಳ ಗ್ರಾಮಸ್ಥರ ಪ್ರಕಾರ, ಕತ್ತಲಾದ ಬಳಿಕ ಕಾಡಿನ ಅಂಚಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಮನೆಗಳು, ಶಾಲೆಗಳು ಮತ್ತು ಗ್ರಾಮೀಣ ರಸ್ತೆಗಳ ಬಳಿಯೂ ಕಾಣಿಸಿಕೊಳ್ಳುತ್ತಿವೆ. ದಾಳಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಈ ವರ್ಷವೊಂದರಲ್ಲೇ ಉತ್ತರಾಖಂಡದಲ್ಲಿ ಚಿರತೆ ದಾಳಿಗೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತಪಟ್ಟವರಲ್ಲಿ ಐದರಿಂದ 12 ವರ್ಷದೊಳಗಿನ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಗ್ರಾಮಸ್ಥರು ಸೌರ ಬೇಲಿ, ಬೀದಿ ದೀಪಗಳು ಮತ್ತು ಪರಿಣಾಮಕಾರಿ ನಿಗಾ ವ್ಯವಸ್ಥೆ ಸೇರಿದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಬಾಲಕಿಯನ್ನು ಕೊಂದ ಚಿರತೆಯನ್ನು ನರಭಕ್ಷಕ ಎಂದು ಘೋಷಿಸಿ ತಕ್ಷಣ ಸೆರೆಹಿಡಿಯಬೇಕು ಅಥವಾ ಕೊಲ್ಲಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು, ಗ್ರಾಮದಲ್ಲಿ ಸೌರ ಬೇಲಿ ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು ಹಾಗೂ ಅರಣ್ಯ ಇಲಾಖೆಯ ಶಾಶ್ವತ ತಂಡವನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.






