ಜಾಗತಿಕ ತೈಲಬೆಲೆ ಏರಿಕೆ ಬೆನ್ನಲ್ಲೇ ದೇಶದಲ್ಲೂ ಹೆಚ್ಚಿದ ಪ್ರಿಮಿಯಂ ಪೆಟ್ರೋಲ್ ದರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಗಲ್ಫ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಕಚ್ಚಾ ತೈಲ ಬೆಲೆ ಏರಿಕೆಯ ಬಿಸಿ ಭಾರತೀಯ ಗ್ರಾಹಕರನ್ನೂ ನಿಧಾನವಾಗಿ ತಟ್ಟುತ್ತಿದೆ. ದೇಶದ ತೈಲ ಮಾರಾಟ ಕಂಪನಿಗಳು ಶುಕ್ರವಾರ 95-ಆಕ್ಟೇನ್ ಪ್ರಿಮಿಯಮ್ ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 2 ರೂ. ನಷ್ಟು ಹೆಚ್ಚಿಸಿವೆ. ಅಂತೆಯೇ ಕೈಗಾರಿಕಾ ಡೀಸೆಲ್ ದರ ಲೀಟರ್ ಗೆ 22 ರೂಪಾಯಿ ಹೆಚ್ಚಳವಾಗಿದೆ.
ಇದೇ ವೇಳೆ ದೇಶದ ಅತಿದೊಡ್ಡ ಇಂಧನ ಮಾರಾಟ ಸಂಸ್ಥೆಯಾದ ಇಂಡಿಯನ್ ಆಯಿಲ್, ತಾರ್ಕಿಕ ಬೆಲೆನಿಗದಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದ್ದು, ಇದರಿಂದಾಗಿ ದೇಶದಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರ ತಕ್ಷಣಕ್ಕೆ ಹೆಚ್ಚಳವಾಗುವ ಸಾಧ್ಯತೆ ಇಲ್ಲ.
ಜಾಗತಿಕ ತೈಲ ಬೆಲೆ ಹೆಚ್ಚಳದ ನಡುವೆಯೂ ಸ್ವಯಂಚಾಲಿತ ಇಂಧನ ಬೆಲೆ ಪರಿಷ್ಕರಣೆಯ ಸಾಧ್ಯತೆ ಇಲ್ಲ ಎಂದು ಇಂಡಿಯನ್ ಆಯಿಲ್ ಜಾಲತಾಣ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದೆ. "ಸೀಮಿತ ಪರಿಷ್ಕರಣೆಯು ಎಕ್ಸ್ ಪಿ-95 ಪ್ರಿಮಿಯಮ್ ಪೆಟ್ರೋಲ್ಗೆ ಮಾತ್ರ ಅನ್ವಯಿಸುತ್ತದೆ. ಇದು ಒಟ್ಟಾರೆ ಬಳಕೆ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ" ಎಂದು ಸಮರ್ಥಿಸಿಕೊಂಡಿದೆ.
ವಿಕಾಸಗೊಳ್ಳುತ್ತಿರುವ ಜಾಗತಿಕ ಪರಿಸ್ಥಿತಿಯ ನಡುವೆಯೂ, ಗಮನ ಸ್ಪಷ್ಟ. ಪೂರೈಕೆಯಲ್ಲಿ ನಿರಂತರತೆ, ತಾರ್ಕಿಕ ಬೆಲೆನಿಗದಿ ಮತ್ತು ವಿಶ್ವಾಸಾರ್ಹ ಸೇವೆ" ಎಂದು ಬಣ್ಣಿಸಿದೆ. ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಾಗೂ ವೈಮಾನಿಕ ಇಂಧನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಕೇವಲ ಶೇ.5ಕ್ಕಿಂತ ಕಡಿಮೆ ಗ್ರಾಹಕರು ತಮ್ಮ ವಾಹನಗಳಿಗೆ ಪ್ರಿಮಿಯಮ್ ಪೆಟ್ರೋಲ್ ಬಳಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.






