ಜಾಗತಿಕ ತಾಪಮಾನ ಏರಿಕೆಯು ವಾತಾವರಣದಿಂದ ಇಂಗಾಲವನ್ನು ಹೀರಿಕೊಳ್ಳುವ ಅರಣ್ಯಗಳ ಸಾಮರ್ಥ್ಯವನ್ನು ಕುಗ್ಗಿಸಬಹುದು : ಕಳವಳ ವ್ಯಕ್ತಪಡಿಸಿದ ಅಧ್ಯಯನ ವರದಿ

Photo : scroll.in
ಹೊಸದಿಲ್ಲಿ : ಐಐಟಿ-ಬಾಂಬೆಯ ಸಂಶೋಧಕರು ಕೈಗೊಂಡ ಅಧ್ಯಯನವು ಅರಣ್ಯ ಪರಿಸರ ವ್ಯವಸ್ಥೆಯ ಮೇಲೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಎತ್ತಿ ತೋರಿಸಿದೆ. ಅದು ಇಂಗಾಲವನ್ನು ಹೀರಿಕೊಳ್ಳುವ ಅರಣ್ಯಗಳ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂದಿರುವ ಅಧ್ಯಯನ ವರದಿಯು, ಕಳೆದೆರಡು ದಶಕಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇದು ಶೇ.6ರಷ್ಟು ಕಡಿಮೆಯಾಗಿರಬಹುದು ಎಂದು ಹೇಳಿದೆ ಎಂದು Mongabay India ವರದಿ ಮಾಡಿದೆ
ಅರಣ್ಯಗಳನ್ನು ಅತ್ಯಂತ ಪರಿಣಾಮಕಾರಿ ಮತ್ತು ಹೇರಳವಾಗಿ ಲಭ್ಯವಿರುವ ‘ಕಾರ್ಬನ್ ಸಿಂಕ್ (ಇಂಗಾಲದ ತೊಟ್ಟಿ)’ ಎಂದು ಪರಿಗಣಿಸಲಾಗಿದ್ದು, ಇವು ವಾತಾವರಣದಿಂದ ಮಿಲಿಯಗಟ್ಟಲೆ ಟನ್ ಕಾರ್ಬನ್ ಡೈಯಾಕ್ಸೈಡ್(ಇಂಗಾಲಾಮ್ಲ)ವನ್ನು ಹೀರಿಕೊಂಡು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ.
Photo : scroll.in
2050ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯು ಜಾಗತಿಕ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯಗಳನ್ನು ಸಾಧನವಾಗಿ ಬಳಸುವ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದೆ. 2030ರ ವೇಳೆಗೆ ಹಸಿರು ಆಚ್ಛಾದನೆಯ ಮೂಲಕ ಹೆಚ್ಚುವರಿಯಾಗಿ 2.5-3 ಬಿಲಿಯನ್ ಟನ್ ಇಂಗಾಲವನ್ನು ಸಂಗ್ರಹಿಸುವ ಸಾಮರ್ಥ್ಯವುಳ್ಳ ಕಾರ್ಬನ್ ಸಿಂಕ್ ಅನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಭಾರತವು ಅದಕ್ಕಾಗಿ ಅರಣ್ಯಗಳನ್ನೇ ನೆಚ್ಚಿಕೊಂಡಿದೆ. ಹೀಗಾಗಿ ಜಾಗತಿಕ ತಾಪಮಾನ ಏರಿಕೆಯು ಇಂಗಾಲವನ್ನು ಹೀರಿಕೊಳ್ಳುವ ಅರಣ್ಯಗಳ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂಬ ಐಐಟಿ -ಬಾಂಬೆಯ ಅಧ್ಯಯನ ವರದಿಯು ಕಳವಳವನ್ನುಂಟು ಮಾಡಿದೆ.
ಹೆಚ್ಚಿನ ಹಸಿರೀಕರಣವು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯ ಸುಧಾರಣೆಗೆ ಕಾರಣವಾಗಬೇಕು ಎಂದೇನಿಲ್ಲ ಎಂಬ ಪ್ರಬಲ ವೈಜ್ಞಾನಿಕ ಸಂದೇಶವನ್ನು ಅಧ್ಯಯನವು ರವಾನಿಸಿದೆ.
Photo : scroll.in
ಸಂಶೋಧನೆಯು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಭಾರತದ ಗುರಿ ಸಾಧನೆಗೆ ಯೋಜನೆಯನ್ನು ರೂಪಿಸುವ ವೈಜ್ಞಾನಿಕ ವಿಶ್ಲೇಷಣೆಯ ಮೇಲೆ ಗಮನಾರ್ಹ ಪರಿಣಾಮವನ್ನೂ ಬೀರಲಿದೆ ಎಂದು 2023 ಡಿಸೆಂಬರ್ ನಲ್ಲಿ ‘ನೇಚರ್ ’ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ.
ಇಂಗಾಲವನ್ನು ಶೇಖರಿಸಿಟ್ಟುಕೊಳ್ಳುವ ಅರಣ್ಯಗಳ ಸಾಮರ್ಥ್ಯದ ಮೇಲೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಇದು ಇನ್ನೂ ವಿಶೇಷವಾಗಿ ಭಾರತದಲ್ಲಿ ಸಂಶೋಧನೆಯ ಅತ್ಯಂತ ನವೀನ ಕ್ಷೇತ್ರವಾಗಿದೆ. ಏಕೆಂದರೆ ಈ ಬದಲಾವಣೆಗಳನ್ನು ದಾಖಲಿಸುವ ವೀಕ್ಷಣಾ ದತ್ತಾಂಶಗಳು ನಮ್ಮ ಬಳಿಯಲ್ಲಿಲ್ಲ ಎಂದು ವರದಿಯ ಲೇಖಕರಲ್ಲೋರ್ವರಾಗಿರುವ ಐಐಟಿ-ಬಾಂಬೆಯ ಸುಬಿಮಲ್ ಘೋಷ ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯು ಸಸ್ಯಗಳು ಮತ್ತು ಅರಣ್ಯಗಳ ಕಾರ್ಯ ನಿರ್ವಹಣೆಯ ಮೇಲೆ ಹಲವಾರು ರೀತಿಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲದು. ಒಂದೆಡೆ ವಾತಾವರಣದಲ್ಲಿ ಹೆಚ್ಚಿನ ಇಂಗಾಲ ಮಟ್ಟವು ಸಸ್ಯಗಳ ಉಳಿವಿಗೆ ಮಹತ್ವದ್ದಾಗಿರುವ ದ್ಯುತಿ ಸಂಶ್ಲೇಷಣೆಗೆ ಚಾಲನೆ ನೀಡುತ್ತದೆ. ಆದರೆ ಇನ್ನೊಂದೆಡೆ ಹೆಚ್ಚಿನ ತಾಪಮಾನವು ದ್ಯುತಿ ಸಂಶ್ಲೇಷಣೆಯ ದರವನ್ನು ಕಡಿಮೆಗೊಳಿಸುತ್ತದೆ.
2001-19ರ ನಡುವೆ ದೇಶದಲ್ಲಿ ಹಸಿರೀಕರಣ ಶೇ.6.75ರಷ್ಟು ಹೆಚ್ಚಾಗಿದ್ದರೂ, ಇದೇ ಅವಧಿಯಲ್ಲಿ ಅರಣ್ಯಗಳು ಹೀರಿಕೊಂಡ ಇಂಗಾಲದ ಪ್ರಮಾಣ ಶೇ.6.19ರಷ್ಟು ಕಡಿಮೆಯಾಗಿತ್ತು ಎನ್ನುವುದನ್ನು ಐಐಟಿ-ಬಾಂಬೆ ಅಧ್ಯಯನವು ಬೆಳಕಿಗೆ ತಂದಿದೆ.
Photo : scroll.in
ಭವಿಷ್ಯದಲ್ಲಿ ಜಾಗತಿಕ ತಾಪಮಾನ ಏರಿಕೆ ಹೆಚ್ಚಾದಾಗ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಹೆಚ್ಚು ಸ್ಪಷ್ಟಗೊಂಡಾಗ ಇಂಗಾಲ ಹೀರಿಕೊಳ್ಳುವಿಕೆ ಹೇಗಿರಬಹುದು ಎಂಬ ಚಿತ್ರಣವನ್ನು ಅಧ್ಯಯನ ವರದಿಯು ಬಿಂಬಿಸಿಲ್ಲ.







