ಚುನಾವಣಾ ಆಯೋಗ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸಿ : ಸುರೇಶ್ ಗೋಪಿ ಗೆಲುವಿನ ಕುರಿತ ಆರೋಪಗಳ ಬಗ್ಗೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ

ರಾಜೀವ್ ಚಂದ್ರಶೇಖರ್ (Photo: PTI)
ತಿರುವನಂತಪುರಂ : ಚುನಾವಣೆ ಸಮಯದಲ್ಲಿ ಯಾವುದೇ ಅಕ್ರಮ ನಡೆದರೆ, ಆ ಬಗ್ಗೆ ಚುನಾವಣಾ ಆಯೋಗ ಅಥವಾ ನ್ಯಾಯಾಲಯಕ್ಕೆ ದೂರು ನೀಡಬೇಕು ಹೊರತು ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು ಮತ್ತು ಪ್ರಚೋದಿಸಲು ಸುಳ್ಳುಗಳನ್ನು ಹರಡುವುದಲ್ಲ ಎಂದು ಕೇರಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮದಿಂದಾಗಿ ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಸಿಪಿಐ ಆರೋಪಿಸಿದೆ. ಇದಲ್ಲದೆ ಸುರೇಶ್ ಗೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.
“ತ್ರಿಶೂರ್ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದ್ದು, ಸುರೇಶ್ ಗೋಪಿ ಗೆಲುವಿಗೆ ಕಾರಣವಾಯಿತು” ಎಂದು ಸಿಪಿಐ ನಾಯಕ ವಿ.ಎಸ್.ಸುನೀಲ್ ಕುಮಾರ್ ಇದಕ್ಕೂ ಮೊದಲು ಆರೋಪಿಸಿದ್ದರು.
ಸುರೇಶ್ ಗೋಪಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಒಂದೂವರೆ ವರ್ಷದ ನಂತರ ಈ ಆರೋಪಗಳನ್ನು ಮಾಡಲಾಗುತ್ತಿದೆ.
ದೂರು ಅಥವಾ ಅರ್ಜಿಯನ್ನು ಸಲ್ಲಿಸುವ ಮೂಲಕ ಚುನಾವಣಾ ಆಯೋಗ ಅಥವಾ ನ್ಯಾಯಾಲಯಗಳ ಮುಂದೆ ಇಂತಹ ವಿಚಾರಗಳನ್ನು ಪ್ರಶ್ನಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
"ಅವರು ಹಾಗೆ ಮಾಡುವುದಿಲ್ಲ. ಬದಲಾಗಿ, ಸುಳ್ಳುಗಳನ್ನು ಹೇಳುವ ಮೂಲಕ ಸಾರ್ವಜನಿಕರನ್ನು ಕೆರಳಿಸಲು ಪ್ರಯತ್ನಿಸುತ್ತಾರೆ ಅಥವಾ ಪ್ರಚಾರದ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ. ಇದೆಲ್ಲವೂ ಒಂದು ನಾಟಕ. ಚುನಾವಣೆ ಸಮೀಪಿಸುತ್ತಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇಂತಹ ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ತ್ರಿಶೂರ್ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ಮುರಳೀಧರನ್ ಅವರನ್ನು ಸೋಲಿಸಿ 74,000ಕ್ಕೂ ಅಧಿಕ ಮತಗಳ ಅಂತರದಿಂದ ಸುರೇಶ್ ಗೋಪಿ ಗೆಲುವನ್ನು ಸಾಧಿಸಿದ್ದರು.







