ಆರೋಗ್ಯ ಸಚಿವರು ಗದರಿಸಿ ಅಮಾನತುಗೊಳಿಸಿದ ವೀಡಿಯೊ ವೈರಲ್ ಬೆನ್ನಲ್ಲೇ ವೈದ್ಯಾಧಿಕಾರಿಯನ್ನು ಮತ್ತೆ ನೇಮಿಸಿಕೊಂಡ ಗೋವಾ ಸಿಎಂ; ಏನಿದು ಪ್ರಕರಣ?

Photo : PTI
ಪಣಜಿ: ವಯೊವೃದ್ಧ ರೋಗಿಯೊಬ್ಬರೊಂದಿಗೆ ದುರಹಂಕಾರದಿಂದ ವರ್ತಿಸಿದ ಆರೋಪದ ಮೇಲೆ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಅಮಾನತುಗೊಳಿಸಿದ್ದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯನ್ನು ರವಿವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತೆ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ.
ಶನಿವಾರ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಶುಯಾಲಿಟಿ ವಾರ್ಡ್ಗೆ ಅನಿರೀಕ್ಷಿತ ಭೇಟಿ ನೀಡಿದ್ದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಯೋವೃದ್ಧ ಮಹಿಳೆಯೊಬ್ಬರಿಗೆ ಅಗತ್ಯ ವೈದ್ಯಕೀಯ ಆರೈಕೆಯನ್ನು ನಿರಾಕರಿಸಿ, ಅವರೊಂದಿಗೆ ದುರಹಂಕಾರದ ವರ್ತನೆ ತೋರಿದ ಆರೋಪದ ಮೇಲೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕಾರ್ರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡು, ನಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು.
ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಶುಯಾಲಿಟಿ ವಾರ್ಡ್ನಲ್ಲಿ ನನ್ನ ಅತ್ತೆಯೊಂದಿಗೆ ವೈದ್ಯರು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಹಿರಿಯ ಪತ್ರಕರ್ತರೊಬ್ಬರು ನೀಡಿದ್ದ ದೂರನ್ನು ಆಧರಿಸಿ, ನಾನು ಈ ಕ್ರಮ ಕೈಗೊಂಡಿದ್ದೇನೆ ಎಂದು ಸಚಿವ ವಿಶ್ವಜಿತ್ ರಾಣೆ ಸ್ಪಷ್ಟನೆ ನೀಡಿದ್ದರು.
ಈಗಾಗಲೇ ನೋವಿನಿಂದ ನರಳುತ್ತಿರುವ ಹಾಗೂ ಪ್ರತಿ ದಿನ ಅದಕ್ಕಾಗಿ ಇಂಜೆಕ್ಷನ್ ಪಡೆಯಬೇಕು ಎಂದು ವೈದ್ಯರಿಂದ ಸಲಹೆ ಪಡೆದಿರುವ ಹಿರಿಯ ನಾಗರಿಕರೊಬ್ಬರಿಗೆ ಸಾರ್ವಜನಿಕ ರಜಾದಿನವಾದ ರವಿವಾರದಂದು ಆ ಸೇವೆಯನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಶುಯಾಲಿಟಿ ವಾರ್ಡ್ನಲ್ಲಿ ನಿರಾಕರಿಸಲಾಗುತ್ತಿದೆ ಎಂದು ಅವರ ಕುಟುಂಬದ ಸದಸ್ಯರು ನನಗೆ ಸಂದೇಶ ರವಾನಿಸಿದ್ದರು ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದ್ದರು.
ಆದರೆ, ಈ ಘಟನೆಯ ಬೆನ್ನಿಗೇಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕಾರ್ ಅವರ ಅಮಾನತು ಆದೇಶವನ್ನು ಹಿಂಪಡೆದಿರುವುದಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಕಟಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ನಾನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಷಯವನ್ನು ಪರಾಮರ್ಶಿಸಿದ್ದು, ಆರೋಗ್ಯ ಸಚಿವರೊಂದಿಗೆ ಈ ಕುರಿತು ಚರ್ಚಿಸಿದ್ದೇನೆ. ಡಾ. ರುದ್ರೇಶ್ ಕುಟ್ಟಿಕಾರ್ರನ್ನು ಸೇವೆಯಿಂದ ಅಮಾನತುಗೊಳಿಸುವುದಿಲ್ಲ ಎಂದು ನಾನು ಗೋವಾ ಜನತೆಗೆ ಭರವಸೆ ನೀಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಆದರೆ, ಅಗತ್ಯ ಆರೈಕೆಯಿಂದ ನಿರಾಕರಣೆಗೊಳಗಾಗಿದ್ದ ರೋಗಿಯ ಪರ ನಿಂತಿದ್ದಕ್ಕೆ ನಾನು ಕ್ಷಮೆ ಯಾಚಿಸುವುದಿಲ್ಲ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸ್ಪಷ್ಟಪಡಿಸಿದ್ದಾರೆ.
ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡು ಬಳಿಕ ಸೇವೆಯಿಂದ ಅಮಾನತುಗೊಳಿಸಿದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆಯ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಭಾರತೀಯ ವೈದ್ಯಕೀಯ ಒಕ್ಕೂಟವೂ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿದ ಕ್ರಮವನ್ನು ಟೀಕಿಸಿವೆ.







