ಗೋವಾದ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ ಪ್ರಕರಣ: ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು

Photo| theprint
ಪಣಜಿ: 25 ಮಂದಿಯ ಪ್ರಾಣಹಾನಿಗೆ ಕಾರಣವಾಗಿದ್ದ ಗೋವಾದ ಬಿರ್ಚ್ ನೈಟ್ ಕ್ಲಬ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗೋವಾದ ನ್ಯಾಯಾಲಯವೊಂದು ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಫೋರ್ಜರಿ ಆರೋಪಕ್ಕೆ ಸಂಬಂಧಿಸಿ ಅವರಿಬ್ಬರೂ ಈಗಲೂ ಪೊಲೀಸರ ವಶದಲ್ಲಿದ್ದಾರೆ.
ಡಿಸೆಂಬರ್ 2025ರಲ್ಲಿ ಬಿರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್ ನಲ್ಲಿ ನಡೆದಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮೆರ್ಸೆಸ್ ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಲೂತ್ರಾ ಸಹೋದರರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದ್ದಾರೆ. ಲೂತ್ರಾ ಸಹೋದರರ ಪರವಾಗಿ ಹಿರಿಯ ವಕೀಲ ಸುಬೋಧ್ ಕಾಂತಕ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಜಾಮೀನು ಮಂಜೂರಾಗಿರುವ ಹೊರತಾಗಿಯೂ ಅವರಿಬ್ಬರೂ ತಕ್ಷಣವೇ ಜೈಲಿನಿಂದ ಬಿಡುಗಡೆಯಾಗುವುದಿಲ್ಲ. ಲೂತ್ರಾ ಸಹೋದರರ ವಿರುದ್ಧ ದಾಖಲಾಗಿರುವ ಮತ್ತೊಂದು ಪ್ರಕರಣದ ತನಿಖೆಯ ಭಾಗವಾಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮಪುಸಾ ಪೊಲೀಸರು ತಿಳಿಸಿದ್ದಾರೆ.




