"ಗೋಡ್ಸೆಯ ಪೂಜಾರಿಗಳೇ, ಇದು ಗಾಂಧಿಯ ನಾಡು - ಗೋಡ್ಸೆಗೆ ಇಲ್ಲಿ ಜಾಗವಿಲ್ಲ": BJP, RSS ವಿರುದ್ಧ ನಟ ಕಿಶೋರ್ ಕುಮಾರ್ ವಾಗ್ದಾಳಿ
“ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ವ್ಯವಸ್ಥೆ ಧರ್ಮ, ದ್ವೇಷ ,ಚುನಾವಣಾ ಅಕ್ರಮಗಳನ್ನು ಬಳಸಿಕೊಳ್ಳುತ್ತಿದೆ”

ಕಿಶೋರ್ ಕುಮಾರ್
ಬೆಂಗಳೂರು: ದಿಲ್ಲಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದಿದೆಯೆನ್ನಲಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ ಕಿಶೋರ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ, ಆರೆಸ್ಸೆಸ್ ಮತ್ತು ದಿಲ್ಲಿ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತಾರೂಢ ವ್ಯವಸ್ಥೆಯು ಧರ್ಮ, ದ್ವೇಷ ಮತ್ತು ಚುನಾವಣಾ ಅಕ್ರಮಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಲಪಂಥೀಯ ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ಹೊರಬಂದು, ಪ್ರತಿಭಟನೆಗಳ ವೇಳೆ ನಡೆದಿದೆಯೆನ್ನಲಾದ ಹಿಂಸಾಚಾರದ ವರದಿಗಳನ್ನು ಪರಿಶೀಲಿಸುವಂತೆ ಹಿಂದೂಗಳು ಹಾಗೂ ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಿಗರಿಗೆ ಕಿಶೋರ್ ಮನವಿ ಮಾಡಿದ್ದಾರೆ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಗಿದ್ದು ‘ಹಿಂದುತ್ವ ಭಯೋತ್ಪಾದಕರು’ ಮಹಿಳೆಯರ ಮೇಲೆ ಕಿರುಕುಳ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರೀತಿಯ ಹಿಂದೂಗಳೇ, ಮೋದಿ ಮತ್ತು ಆರೆಸ್ಸೆಸ್ ಬೆಂಬಲಿಗರೇ, ದಿಲ್ಲಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಿದ್ದೀರಿ. ನಿಮಗೆ ನಿಮ್ಮ ದೇಶದ ಮೇಲೆ ಪ್ರೀತಿ ಇದ್ದರೆ, ದಯವಿಟ್ಟು ಬಲಪಂಥೀಯ ಪ್ರಭಾವದಿಂದ ಹೊರಬಂದು ಈಗಲೇ ಪರಿಶೀಲಿಸಿ. ರಾಜಕೀಯ ಅಥವಾ ಸೈದ್ಧಾಂತಿಕ ಒಲವುಗಳ ಕಾರಣಕ್ಕೆ ನಡೆದಿದೆಯೆನ್ನಲಾದ ಹಿಂಸಾಚಾರವನ್ನು ಕಡೆಗಣಿಸಬಾರದು ಎಂದು ಅವರು ಜನರಿಗೆ ಮನವಿ ಮಾಡಿದರು.
ನಟ ಕಿಶೋರ್ ಅವರು ದಿಲ್ಲಿ ಪೊಲೀಸರನ್ನೂ ಟೀಕಿಸಿದ್ದು, ಹಲ್ಲೆಗಳಿಗೆ ಕಾರಣರೆನ್ನಲಾದವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ನಡೆದಿದೆಯೆನ್ನಲಾದ ಹಿಂಸಾಚಾರವನ್ನು 2002ರ ಗುಜರಾತ್ ಗಲಭೆಗಳಿಗೆ ಹೋಲಿಸಿದ ಅವರು, ಮೋದಿ ಮತ್ತು ಶಾ ಅದೇ ರೀತಿಯ ಕಾರ್ಯವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2002ರ ಗುಜರಾತ್ ಗಲಭೆಗಳು ಮತ್ತು ಬಿಲ್ಕಿಸ್ ಬಾನು ಪ್ರಕರಣವನ್ನು ಉಲ್ಲೇಖಿಸಿದ ಕಿಶೋರ್, ಗಲಭೆಗಳ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆಯನ್ನು ಪ್ರಸ್ತಾಪಿಸಿದರು. ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿಗೆ ಸಂಬಂಧಿಸಿದ ಕೃತ್ಯಗಳನ್ನೂ ಉಲ್ಲೇಖಿಸಿದರು.
ಅತ್ಯಾಚಾರ, ಕೊಲೆ ಮತ್ತು ಕೋಮು ಹಿಂಸಾಚಾರದ ಆರೋಪಗಳನ್ನು ಎದುರಿಸುತ್ತಿರುವವರಿಗೆ ಅವರ ಧರ್ಮ ಮತ್ತು ಸಮುದಾಯದ ಸಂಪರ್ಕ ಕಲ್ಪಿಸಲು ಬಯಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ನಟ ಕಿಶೋರ್ ಅವರು ಬಿಜೆಪಿ, ಆರೆಸ್ಸೆಸ್, ಹಿಂದೂ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡರು.
ಈ ಅತ್ಯಾಚಾರಿಗಳು ಮತ್ತು ಕೊಲೆಗಾರರ ಪರವಾಗಿ ನಿಲ್ಲಲು ನೀವು ಬಯಸುತ್ತೀರಾ? ಹಿಂದೂಗಳು ಇದೇ ರೀತಿಯಾಗಿ ಗುರುತಿಸಿಕೊಳ್ಳಬೇಕೆಂದು ನೀವು ಬಯಸುತ್ತೀರಾ?” ಎಂದು ಅವರು ಪ್ರಶ್ನಿಸಿದರು. ಇಂತಹ ವ್ಯಕ್ತಿಗಳನ್ನು ಬೆಂಬಲಿಸುವುದರಿಂದ ಸಮುದಾಯಕ್ಕೆ ಅವಮಾನವಾಗಲಿದೆ ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾದ ಸಂಸ್ಥೆಗಳ ಮೇಲೆ ಪ್ರಭಾವ ಹೊಂದಿದ್ದರೂ ಸರಕಾರ ಬಲಪ್ರಯೋಗದ ಹಾದಿ ಹಿಡಿಯುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಧಾರ್ಮಿಕ ಭಾವನೆಗಳು ಮತ್ತು ದ್ವೇಷವನ್ನು ಬಳಸಿಕೊಳ್ಳುತ್ತಿದೆ ಎಂದು ನಟ ಕಿಶೋರ್ ಆರೋಪಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ತನ್ನ ಸಾಧನೆ ತೋರಿಸಲು ಏನೂ ಇಲ್ಲ ಎಂದೂ ಅವರು ಟೀಕಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದಗಳ ನಡುವೆಯೂ ಆಡಳಿತ ವ್ಯವಸ್ಥೆಯು ಚುನಾವಣಾ ಆಯೋಗವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಒಳ್ಳೆಯ ದಾರಿಯಲ್ಲಾಗಲಿ, ಅಡ್ಡದಾರಿಯಲ್ಲಾಗಲಿ, ಭ್ರಷ್ಟ ಚುನಾವಣಾ ಆಯೋಗವನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ Gen Z ಮತದಾರರನ್ನು ಕಳೆದುಕೊಳ್ಳಬೇಕಾದರೂ ಅವರಿಗೆ ಅದರ ಬಗ್ಗೆ ಚಿಂತೆಯಿಲ್ಲ. ಏಕೆಂದರೆ, ಈಗ ಚುನಾವಣೆಗಳನ್ನು ಗೆಲ್ಲಲು ಅವರಿಗಿರುವ ಏಕೈಕ ಮಾರ್ಗ ಇದು ಎಂದು ಅವರು ಹೇಳಿದರು.
ಚುನಾವಣಾ ಅಕ್ರಮಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವುದು ಬಿಜೆಪಿಯು ಅಧಿಕಾರವನ್ನು ಉಳಿಸಿಕೊಳ್ಳುವ ಮಾರ್ಗಗಳಾಗಿವೆ ಎಂದು ನಟ ಕಿಶೋರ್ ಆರೋಪಿಸಿದ್ದಾರೆ. ರಾಮಮಂದಿರದ ವಿಚಾರದಲ್ಲಿಯೂ ಬಿಜೆಪಿಯನ್ನು ಟೀಕಿಸಿದ ಅವರು, ಪಕ್ಷದ ನಾಯಕರು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂ ಮತದಾರರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಕಿಶೋರ್, ಧರ್ಮವನ್ನು ರಕ್ಷಿಸುವ ನೆಪದಲ್ಲಿ ಮಾಡಲಾಗುವ ಪ್ರತಿಪಾದನೆಗಳು ದೇಶ ಮತ್ತು ಅದರ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರಕ್ಷಿಸುವುದಕ್ಕಿಂತ ಮುಖ್ಯವೇ ಎಂದು ಪ್ರಶ್ನಿಸಿದರು.
“ಇದು ಗಾಂಧೀಜಿಯವರ ನಾಡು. ಇದನ್ನು ಗೋಡ್ಸೆಯ ನಾಡಾಗಲು ನಾವು ಬಿಡುವುದಿಲ್ಲ” ಎಂದು ಅವರು ಹೇಳಿದರು.
ಗೋಡ್ಸೆಯ ಸಿದ್ಧಾಂತದ ಬೆಂಬಲಿಗರು ಎಂದು ತಾವು ಬಣ್ಣಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ ಕಿಶೋರ್, ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಎದುರಿಸುವ ಧೈರ್ಯವಿಲ್ಲದಿದ್ದವರು, ನಿರಾಯುಧ ಗಾಂಧೀಜಿಯವರನ್ನು ಹತ್ಯೆ ಮಾಡಿದವರನ್ನು ಬೆಂಬಲಿಸಿದರು. ಅವರ ಕೃತ್ಯಗಳನ್ನು ಜನರು ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ ಅವರು, ಇಂತಹವರು ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಹೇಳಿದರು.
“ಕೇಳಿಸಿಕೊಳ್ಳಿ ಮೋದಿ, ಶಾ, ನಿಮ್ಮ ಪ್ರತಿಯೊಂದು ಕೊಳಕು ಕೃತ್ಯ, ಪ್ರತಿಯೊಂದು ಲಾಠಿ ಪ್ರಹಾರ, ನಿಮ್ಮ ಪ್ರತಿಯೊಂದು ನಡೆಯನ್ನೂ ನೆನಪಿಟ್ಟುಕೊಳ್ಳಲಾಗುವುದು. ಈ ನಾಯಕರು ಎಲ್ಲಿಗೆ ಹೋದರೂ ಜನರು ಅಲ್ಲಿ ಸೇರಿ ಅವರ ವಿರುದ್ಧ ಘೋಷಣೆಗಳನ್ನು ಕೂಗಲಿದ್ದಾರೆ ಎಂದು ಹೇಳಿದರು.






