BRICS ಶೃಂಗಸಭೆ | ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಭಾಷಣದ ವೇಳೆ ನೆಕ್ಕಿನೆಕ್ಕಿ ನಟ್ಸ್ ತಿಂದ MEA ವಕ್ತಾರ ರಣಧೀರ್ ಜೈಸ್ವಾಲ್; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
"ಅವರಿಗೆ ತುಂಬಾ ಹಸಿವಾಗಿರುವಂತೆ ಕಾಣುತ್ತದೆ!" ಎಂದು ವ್ಯಂಗ್ಯವಾಡಿದ ಜನರು

Photo Credit: X
ಹೊಸದಿಲ್ಲಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಭಾಷಣ ಮಾಡುತ್ತಿದ್ದ ವೇಳೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮೇಜಿನ ಮೇಲಿದ್ದ ನಟ್ಸ್ (ಒಣ ಬೀಜ) ತಿನ್ನುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯಕ್ಕೆ ‘X’ನಲ್ಲಿ ಹಲವು ಮಂದಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗಾಗಿ ಮೇಜಿನ ಮೇಲೆ ನಟ್ಸ್ ನ ಡಬ್ಬಿ ಇಡಲಾಗಿತ್ತು. ಪೆಜೆಶ್ಕಿಯನ್ ಭಾಷಣ ಮಾಡುತ್ತಿದ್ದಾಗ ಜೈಸ್ವಾಲ್ ಆ ಡಬ್ಬಿಯಿಂದ ಪದೇ ಪದೇ ನಟ್ಸ್ ತೆಗೆದುಕೊಂಡು ತಿನ್ನುತ್ತಿದ್ದರು. ಮತ್ತಷ್ಟು ನಟ್ಸ್ ತೆಗೆದುಕೊಳ್ಳುವ ಮೊದಲು ಬೆರಳುಗಳನ್ನು ನೆಕ್ಕುತ್ತಿರುವುದೂ ವೀಡಿಯೊದಲ್ಲಿ ಕಾಣಿಸುತ್ತದೆ.
ವಿಶ್ಲೇಷಕ ಮಾರಿಯೋ ನೌಫಾಲ್ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪೆಜೆಶ್ಕಿಯನ್ ಭಾಷಣ ಮಾಡುತ್ತಿದ್ದರೂ ಜೈಸ್ವಾಲ್ ತಿಂಡಿ ತಿನ್ನುವುದನ್ನು ಮುಂದುವರಿಸಿರುವುದನ್ನು ವೀಡಿಯೊ ತೋರಿಸುತ್ತದೆ.
‘ಆ ಅಧಿಕಾರಿ ನಟ್ಸ್ ನ ಡಬ್ಬಿಯನ್ನೇ ಖಾಲಿ ಮಾಡುತ್ತಿದ್ದರು’ ಎಂದು ಮಾರಿಯೋ ನವ್ಫಾಲ್ ಬರೆದಿದ್ದಾರೆ. ಬಳಿಕ ನಟ್ಸ್ ನ ಡಬ್ಬಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗಿದೆ. ಇದನ್ನು ಅವರು ‘ನಿಜವಾದ ಅರ್ಥದಲ್ಲಿ ರಾಜತಾಂತ್ರಿಕ ಹಸ್ತಕ್ಷೇಪ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ವೀಡಿಯೊ ‘X’ನಲ್ಲಿ ವೈರಲ್ ಆದ ಬಳಿಕ ಜೈಸ್ವಾಲ್ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಂಗ್ಯವಾಡಿದ್ದಾರೆ. ಒಬ್ಬರು, ‘ಪೆಜೆಶ್ಕಿಯನ್ ರಾಜತಾಂತ್ರಿಕ ಭಾಷಣ ಮಾಡುತ್ತಿದ್ದರೆ, ಜೈಸ್ವಾಲ್ ನಟ್ಸ್ ಡಬ್ಬಿಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತಿದ್ದರು’ ಎಂದು ಬರೆದಿದ್ದಾರೆ.
ಮತ್ತೊಬ್ಬರು ‘ನಟ್ಸ್ ತಿನ್ನುವ ಭರಾಟೆ!’ (Going nuts!) ಎಂದು ಕಮೆಂಟ್ ಮಾಡಿದ್ದಾರೆ.
ಜೈಸ್ವಾಲ್ ಅವರು ನಟ್ಸ್ ತಿಂದ ಬಳಿಕ ಬೆರಳುಗಳನ್ನು ನೆಕ್ಕಿದ್ದನ್ನೂ ಬಳಕೆದಾರರು ಗಮನಿಸಿದ್ದಾರೆ. ‘ಸ್ವಲ್ಪವೂ ಉಪ್ಪನ್ನು ಉಳಿಸದಿರಲು ಅವರು ದೃಢನಿಶ್ಚಯ ಮಾಡಿದಂತೆ ಕಾಣುತ್ತಿದ್ದರು’ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಜೈಸ್ವಾಲ್ ಅವರನ್ನು ‘ಮತ್ತೊಬ್ಬ ಆಹಾರಪ್ರಿಯ ದೇಸಿ ಜೇಮ್ಸ್ ಬಾಂಡ್’ ಎಂದು ಕರೆದಿದ್ದಾರೆ. ಅವರ ತಿಂಡಿ ಹುಡುಕಾಟವನ್ನು ‘ಮಿಷನ್ ಇಂಪಾಸಿಬಲ್: ಮಿಷನ್–ಫೈಂಡ್ ದ ಸ್ನ್ಯಾಕ್ಸ್’ (ತಿಂಡಿ ಹುಡುಕುವ ಕಾರ್ಯಾಚರಣೆ) ಎಂದು ಬಣ್ಣಿಸಿದ್ದಾರೆ.
ಇನ್ನು ಕೆಲವರು ‘ಅವರಿಗೆ ಸಕ್ಕರೆಯ ಕೊರತೆ (sugar deficit) ಇರಬೇಕು’ ಎಂದು ತಮಾಷೆ ಮಾಡಿದ್ದಾರೆ. ‘ಆ ವ್ಯಕ್ತಿಗೆ ತುಂಬಾ ಹಸಿವಾಗಿರುವಂತೆ ಕಾಣುತ್ತದೆ!’ ಎಂದು ಮತ್ತೊಬ್ಬರು ಬರೆದಿದ್ದಾರೆ.
ಜೈಸ್ವಾಲ್ ಅವರ ಊಟದ ಶಿಷ್ಟಾಚಾರಕ್ಕೂ ಟೀಕೆ ವ್ಯಕ್ತವಾಗಿದೆ. ‘ಅವರು ಬಾಯಿ ತೆರೆದು ಅಗಿಯುತ್ತಿದ್ದಾರೆ’ ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಅವರ ನಡವಳಿಕೆಯನ್ನು ‘ಅಸಹ್ಯಕರವಾದ, ಉಚಿತವಾಗಿ ತಿನ್ನುವವರ ಮನಸ್ಥಿತಿ’ ಎಂದು ಕಮೆಂಟ್ ಮಾಡಿದ್ದಾರೆ.
ಈ ದೃಶ್ಯ ಭಾರತಕ್ಕೆ ಮುಜುಗರ ಉಂಟುಮಾಡಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಧಿಕೃತ ರಾಜತಾಂತ್ರಿಕ ಭಾಷಣ ನಡೆಯುತ್ತಿದ್ದ ವೇಳೆ ಜೈಸ್ವಾಲ್ ಅವರು ಏಕೆ ತಿಂಡಿ ತಿನ್ನುವುದರಲ್ಲೇ ಹೆಚ್ಚು ಗಮನಹರಿಸಿದ್ದರು ಎಂದು ಕೆಲವರು ಪ್ರಶ್ನಿಸಿದ್ದಾರೆ.
ಹೀಗಾಗಿ ಜೈಸ್ವಾಲ್ ಅವರ ಪದೇ ಪದೇ ತಿಂಡಿ ತೆಗೆದುಕೊಳ್ಳುವುದು, ಬೆರಳುಗಳನ್ನು ನೆಕ್ಕುವುದು ಮತ್ತು ಊಟದ ಶಿಷ್ಟಾಚಾರ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಹಾಗೂ ಟೀಕೆಗೆ ಕಾರಣವಾಗಿದೆ.






