ಉತ್ತರ ಪ್ರದೇಶ: ಉಪ ಕುಲಪತಿ ಸಹಿತ ವಿವಿ ಅಧಿಕಾರಿಗಳ ಮೇಲೆ ಎಬಿವಿಪಿ ಸದಸ್ಯರಿಂದ ಅಮಾನುಷ ಹಲ್ಲೆ

ಹೊಸದಿಲ್ಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರುಪಟ್ಟಣ ಗೋರಖ್ಪು ರದ ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಉಪಕುಲಪತಿ, ರಿಜಿಸ್ಟ್ರಾರ್ ಹಾಗೂ ಮಧ್ಯಪ್ರವೇಶಿಸಿದ ಪೊಲೀಸರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆಯಿಂದ ವಿಶ್ವವಿದ್ಯಾನಿಲಯದ ಗೇಟ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಸದಸ್ಯರು ಪ್ರತಿಭಟನಾ ನಿರತ ಸದಸ್ಯರನ್ನು ಭೇಟಿ ಮಾಡಲು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ ನಿರಾಕರಿಸಿದ ನಂತರ ಆಕ್ರೋಶಿತರಾಗಿ ಈ ಕೃತ್ಯ ನಡೆಸಿದ್ದಾರೆ.
ಆಕ್ರೋಶಗೊಂಡ ಎಬಿವಿಪಿ ಕಾರ್ಯಕರ್ತರು ಉಪಕುಲಪತಿಗಳ ಕಚೇರಿಗೆ ನುಗ್ಗಿ ಬಾಗಿಲು ಒಡೆದರು.
ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದ ಕೆಲವು ಪ್ರಾಧ್ಯಾಪಕರ ಜೊತೆಗೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಉಪ ಡೀನ್ ಅವರನ್ನೂ ಎಬಿವಿಪಿ ಸದಸ್ಯರು ಅಮಾನುಷವಾಗಿ ಥಳಿಸಿದ್ದಾರೆ. ಹಿಂಸಾಚಾರದ ಪರಿಣಾಮವಾಗಿ, ಆಡಳಿತ ಮಂಡಳಿಯ ಅನೇಕ ಸದಸ್ಯರು ಗಾಯಗೊಂಡರು.
ಖಚಿತ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದಾಗ್ಯೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ತರುವಾಯ, ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು, ಕೆಲವು ಎಬಿವಿಪಿ ಸದಸ್ಯರನ್ನು ಬಂಧಿಸಿದರು.
ವಾರದ ಹಿಂದೆ ಎಬಿವಿಪಿ ಕಾರ್ಯಕರ್ತರು ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದಲ್ಲಿ ಉಪಕುಲಪತಿಗಳ ಪ್ರತಿಕೃತಿ ದಹಿಸಿದ್ದರು. ಜೂನ್ 26 ರಂದು ಎಬಿವಿಪಿ ಸದಸ್ಯರು ಆಡಳಿತ ಕಟ್ಟಡದ ಮೂರು ಗೇಟ್ ಗಳಬೀಗಗಳನ್ನು ಮುರಿದು ಪ್ರತಿಭಟಿಸಿದ್ದರು.
ವಿವಿಯಲ್ಲಿ ಅಕ್ರಮ ನಡೆದಿದೆ ಎಂದು ಎಬಿವಿಪಿ ಸದಸ್ಯರು ಕೆಲವು ಸಮಯದಿಂದ ಸತತ ಪ್ರತಿಭಟನೆ ನಡೆಸುತ್ತಿದ್ದರು.







