ಐದು ವರ್ಷಗಳಲ್ಲಿ 6.15 ಲಕ್ಷ ಕೋಟಿ ರೂ. ಸಾಲಗಳನ್ನು ʼರೈಟ್ ಆಫ್ʼ ಮಾಡಿದ ಸರಕಾರಿ ಬ್ಯಾಂಕುಗಳು

ಸಾಂದರ್ಭಿಕ ಚಿತ್ರ | Photo Credit ; PTI
ಹೊಸದಿಲ್ಲಿ: ಆರ್ಬಿಐ ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ ಸರಕಾರಿ ಬ್ಯಾಂಕುಗಳು ಕಳೆದ ಐದು ವಿತ್ತವರ್ಷಗಳಲ್ಲಿ ಮತ್ತು ಪ್ರಸಕ್ತ ವಿತ್ತವರ್ಷದಲ್ಲಿ ಸೆ.30ರವರೆಗಿನ ಅವಧಿಯಲ್ಲಿ 6.15 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿವೆ ಅಥವಾ ತಮ್ಮ ಲೆಕ್ಕ ಪುಸ್ತಕಗಳಿಂದ ತೊಡೆದುಹಾಕಿವೆ.
ದೊಡ್ಡ ಪ್ರಮಾಣದಲ್ಲಿ ಸಾಲಗಳನ್ನು ರೈಟ್ ಆಫ್ ಮಾಡಲಾಗಿದ್ದರೂ ಕೇಂದ್ರ ಸರಕಾರವು ಸುಧಾರಿತ ಆರ್ಥಿಕ ಸಾಧನೆ ಮತ್ತು ಬಲವಾದ ಬಂಡವಾಳ ಸ್ಥಿತಿಯನ್ನು ಉಲ್ಲೇಖಿಸಿ 2022-23ನೇ ವಿತ್ತವರ್ಷದಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಬಂಡವಾಳವನ್ನು ಹರಿಸಿಲ್ಲ.
ರೈಟ್ ಆಫ್ ಮಾಡಲಾದ ಸಾಲಗಳ ಮೊತ್ತ 2020-21ರಲ್ಲಿ 1.33 ಲಕ್ಷ ಕೋಟಿ ರೂ.ಗೇರಿತ್ತು. 2021-22ರಲ್ಲಿ 1.16 ಲಕ್ಷ ಕೋಟಿ ರೂ.ಇಳಿದಿದ್ದ ಅದು 2022-23ರಲ್ಲಿ ಮತ್ತೆ 1.27 ಲಕ್ಷ ಕೋಟಿ ರೂ.ಗೇರಿತ್ತು.
ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ಸಾಲಗಳ ಪೈಕಿ ಕೇವಲ 1.65 ಲಕ್ಷ ಕೋಟಿ ರೂ.ಗಳನ್ನು ವಸೂಲಿ ಮಾಡಿವೆ.
ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಬಂಡವಾಳ ಬೆಂಬಲದ ಅನುಪಸ್ಥಿತಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹವನ್ನು ಹೆಚ್ಚಿಸುತ್ತಿವೆ. ಅವು ಎ.2022 ಮತ್ತು ಸೆ.2025ರ ನಡುವೆ ಈಕ್ವಿಟಿ ಮತ್ತು ಬಾಂಡ್ ವಿತರಣೆಗಳ ಮೂಲಕ 1.79 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಬ್ಯಾಂಕುಗಳ ಲಾಭದಾಯಕತೆ ಹೆಚ್ಚಾಗಿರುವುದರಿಂದ ಅವು ಈಗ ಮಾರುಕಟ್ಟೆ ಹಣಕಾಸು ಮತ್ತು ಆಂತರಿಕ ಆದಾಯ ಸಂಗ್ರಹಗಳನ್ನು ನೆಚ್ಚಿಕೊಂಡಿವೆ ಎಂದು ಸರಕಾರವು ಹೇಳಿದೆ.
ಸಹಾಯಕ ವಿತ್ತಸಚಿವ ಪಂಕಜ್ ಚೌಧರಿಯವರ ಪ್ರಕಾರ, ಬ್ಯಾಂಕುಗಳು ಸಾಮಾನ್ಯವಾಗಿ ನಾಲ್ಕು ವರ್ಷಗಳ ಬಳಿಕ ಆರ್ಬಿಐ ನಿಯಮಗಳು ಮತ್ತು ಆಡಳಿತ ಮಂಡಳಿಯಿಂದ ಅನುಮೋದಿತ ನೀತಿಗಳ ಪ್ರಕಾರ ಅನುತ್ಪಾದಕ ಆಸ್ತಿಗಳಿಗೆ (ಎನ್ಪಿಎ) ಸಂಪೂರ್ಣ ಅವಕಾಶವನ್ನು ಕಲ್ಪಿಸಿದ ಬಳಿಕ ಸಾಲಗಳನ್ನು ರೈಟ್ ಆಫ್ ಮಾಡುತ್ತವೆ. ರೈಟ್ ಆಫ್ ಎಂದರೆ ಸಾಲಗಳ ಮನ್ನಾ ಎಂದು ಅರ್ಥವಲ್ಲ ಮತ್ತು ಸಾಲಗಾರರು ತಮ್ಮ ಸಾಲಬಾಕಿಗಳನ್ನು ಮರುಪಾವತಿಸಲು ಹೊಣೆಗಾರರಾಗಿರುತ್ತಾರೆ. ಸಿವಿಲ್ ನ್ಯಾಯಾಲಯಗಳು,ಸಾಲ ವಸೂಲಾತಿ ನ್ಯಾಯಮಂಡಳಿಗಳು, SARFAESI ಕಾಯ್ದೆಯಡಿ ಕ್ರಮ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ದಿವಾಳಿತನ ಪ್ರಕ್ರಿಯೆಗಳು ಸೇರಿದಂತೆ ವಿವಿಧ ಕಾರ್ಯವಿಧಾನಗಳ ಮೂಲಕ ಬ್ಯಾಂಕುಗಳು ಮರುವಸೂಲಿ ಪ್ರಯತ್ನಗಳನ್ನು ಮುಂದುವರಿಸುತ್ತವೆ ಎಂದು ಸಚಿವರು ವಿವರಿಸಿದರು.







