Instagram | CJP ಚಳವಳಿಯ ರೀಚ್ ಗೆ ಬ್ರೇಕ್?; Meta – ಸರಕಾರದ ವಿರುದ್ಧ ಆರೋಪ

Photo Credit : altnews.in
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಬಿಜೆಪಿ ಈಗ ಅದೇ ಸಾಮಾಜಿಕ ಜಾಲತಾಣಗಳ ಶಕ್ತಿಗೆ ಬೆಚ್ಚಿ ಬೀಳುತ್ತಿದೆಯೇ? ಕಾಕ್ರೋಚ್ ಜನತಾ ಪಾರ್ಟಿ (CJP) ಚಳವಳಿಯ ಬಳಿಕ ಇನ್ಸ್ಟಾಗ್ರಾಂನಲ್ಲಿ ಕಂಟೆಂಟ್ ಮತ್ತು ಖಾತೆಗಳ ನಿರ್ಬಂಧದ ಬಗ್ಗೆ ಕೇಳಿಬರುತ್ತಿರುವ ಆರೋಪಗಳು ಈ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.
ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ವೇಗವಾಗಿ ತಲುಪಿದ AAP ಮಾದರಿಯನ್ನು ಬಿಜೆಪಿ ಅಳವಡಿಸಿಕೊಂಡು, 2014ರ ವೇಳೆಗೆ ಸಾಮಾಜಿಕ ಮಾಧ್ಯಮವೇ ಬಿಜೆಪಿಯ ಪ್ರಮುಖ ರಾಜಕೀಯ ಸಂವಹನ ಸಾಧನಗಳಲ್ಲಿ ಒಂದಾಯಿತು. ಇಂದು ಅದೇ ಸಾಮಾಜಿಕ ಮಾಧ್ಯಮದಲ್ಲಿ ಹೊಸ ತಲೆಮಾರಿನ ಯುವಜನರು ಸರಕಾರದ ನೀತಿಗಳು, ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. CJP ಈ ಬದಲಾವಣೆಯ ಒಂದು ಗಮನಾರ್ಹ ಉದಾಹರಣೆ.
ಸಿಜೆಐ ಸೂರ್ಯಕಾಂತ್ ಅವರ ವ್ಯಂಗ್ಯಭರಿತ ಹೇಳಿಕೆಯಿಂದ ಹುಟ್ಟಿಕೊಂಡ CJP ಚಳವಳಿಯ ವೇಗದಲ್ಲಿ ಇನ್ಸ್ಟಾಗ್ರಾಂ ನ ಪಾತ್ರ ನಿರ್ಣಾಯಕವಾಗಿತ್ತು. ಪ್ರತಿಭಟನೆಗೆ ಸಂಬಂಧಿಸಿದ ರೀಲ್ಸ್, ಮೀಮ್ಸ್, ವೀಡಿಯೋಗಳು ಮತ್ತು ಸೃಜನಾತ್ಮಕ ಕಂಟೆಂಟ್ ಗಳು ವ್ಯಾಪಕವಾಗಿ ವೈರಲ್ ಆದವು. ಪ್ರತಿಭಟನೆಯ ಕರೆ ನೀಡುವುದರಿಂದ ಹಿಡಿದು ಪೊಲೀಸ್ ಕ್ರಮಗಳ ದೃಶ್ಯಗಳನ್ನು ಹಂಚಿಕೊಳ್ಳುವವರೆಗೆ ಇನ್ಸ್ಟಾಗ್ರಾಂ ಪ್ರಮುಖ ವೇದಿಕೆಯಾಯಿತು. ಹೀಗಾಗಿ ಈ ಚಳವಳಿಯ ಸಂದರ್ಭದಲ್ಲಿ ಇನ್ಸ್ಟಾಗ್ರಾಂ ಕೇವಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರಲಿಲ್ಲ; ಬದಲಾಗಿ, ಅದು ಮಾಹಿತಿ ಹರಡುವ, ಜನರನ್ನು ಸಂಘಟಿಸುವ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವ ರಾಜಕೀಯ ಸಾಧನವಾಗಿತ್ತು.
ಅದಕ್ಕಾಗಿಯೇ ಈಗ ಕೇಳಿಬರುತ್ತಿರುವ ಕಂಟೆಂಟ್ ನಿರ್ಬಂಧದ ಆರೋಪಗಳು ಮಹತ್ವ ಪಡೆದಿವೆ. CJP ಚಳವಳಿಗಾರರು ಮಾತ್ರವಲ್ಲದೆ ಪತ್ರಕರ್ತರು, ರಾಜಕೀಯ ಕಂಟೆಂಟ್ ಕ್ರಿಯೇಟರ್ ಗಳು ಮತ್ತು ಹೋರಾಟಗಾರರು ತಮ್ಮ ಪೋಸ್ಟ್ಗಳು ಭಾರತದಲ್ಲಿ ನಿರ್ಬಂಧಕ್ಕೊಳಗಾಗಿವೆ, ತೆಗೆದುಹಾಕಲಾಗಿದೆ ಅಥವಾ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಅಭಿನವ್ ಬಿಷ್ಟ್, ಸೌರವ್ ದಾಸ್, ಆಶುತೋಷ್ ರಾಂಕಾ, ಸಾಕ್ಷಿ, ಸೃಷ್ಟಿ ಖನ್ನಾ, ಅಂಜಲಿ ಪ್ರಿಯಾ, ಪತ್ರಕರ್ತ ಮಹಮ್ಮದ್ ಝುಬೈರ್ ಸೇರಿದಂತೆ ಇತರ ರಾಜಕೀಯ ಕಂಟೆಂಟ್ ರಚಿಸುವವರು ಕೂಡ ತಮ್ಮ ಪೋಸ್ಟ್ ಗಳು ಅಥವಾ ಖಾತೆಗಳ ಮೇಲೆ ಮೆಟಾ ನಿರ್ಬಂಧ ವಿಧಿಸಿದೆ ಎಂದು ಆರೋಪಿಸಿದ್ದಾರೆ. ದಿಲ್ಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ತಮ್ಮ ಖಾತೆಯನ್ನು ಮುನ್ನೆಚ್ಚರಿಕೆ ಇಲ್ಲದೆ ನಿರ್ಬಂಧಿಸಲಾಗಿದೆ ಎಂದು ಮೆಟಾವನ್ನು ಪ್ರಶ್ನಿಸಿದ್ದರು.
ಉದಾಹರಣೆಗೆ, CJPಯ ಸೌರವ್ ದಾಸ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಜುಲೈನಲ್ಲಿ ಮೆಟಾದ ಸ್ವಯಂಚಾಲಿತ ಮಾಡರೇಶನ್ ವ್ಯವಸ್ಥೆ ತಪ್ಪಾಗಿ ಸಸ್ಪೆಂಡ್ (suspend) ಮಾಡಿತ್ತು ಎಂದು ವರದಿಯಾಗಿತ್ತು. ಬಳಿಕ ಖಾತೆಯನ್ನು ಮರುಸ್ಥಾಪಿಸಲಾಯಿತು. ಆದರೆ ಆಗಸ್ಟ್ 6ರಂದು ದಾಸ್ ತಮ್ಮ ಎರಡು ಇನ್ಸ್ಟಾಗ್ರಾಂ ಪೋಸ್ಟ್ ಗಳು ಭಾರತದಲ್ಲಿ ನಿರ್ಬಂಧಕ್ಕೊಳಗಾಗಿವೆ ಎಂದು ಆರೋಪಿಸಿದ್ದರು. ಅವುಗಳಲ್ಲಿ ಬೆಂಗಳೂರಿನ ಶಾಂತಿಯುತ ಪ್ರತಿಭಟನೆಗೆ ಆಗಮಿಸಿದ ಮಾಹಿತಿ ಮತ್ತು ಜುಲೈ 20ರ ದಿಲ್ಲಿ ಪ್ರತಿಭಟನೆಗೆ CJPಗೆ ಪೊಲೀಸ್ ಅನುಮತಿ ದೊರೆತಿರುವ ವಿಷಯವಿತ್ತು. ಇದನ್ನು ಅವರು ಪ್ರತಿಭಟನೆ ಮತ್ತು ಮೋದಿ ಸಂಬಂಧಿತ ಕಂಟೆಂಟ್ ವಿರುದ್ಧದ ‘blanket ban’ ಎಂದು ಆರೋಪಿಸಿದ್ದಾರೆ.
CJP ಪ್ರತಿಭಟನೆಗೆ ಸಂಬಂಧಿಸಿದ ವೀಡಿಯೋಗಳ ಮೂಲಕ ಇನ್ಸ್ಟಾಗ್ರಾಂನಲ್ಲಿ ದೊಡ್ಡ ಪ್ರಮಾಣದಲ್ಲಿ ಫಾಲೋವರ್ ಗಳನ್ನು ಗಳಿಸಿದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ ತಮ್ಮ ಖಾತೆ ಸಸ್ಪೆಂಡ್ ಆಗಿತ್ತು ಎಂದು ಆರೋಪಿಸಿದ್ದರು. ನಂತರ ಅವರ ಖಾತೆ ಮರುಸ್ಥಾಪನೆಯಾಯಿತು.
So Meta has restricted 4 of my videos in India.
— Ashutosh Ranka (@AshutoshRanka) August 7, 2026
One video showed how police was stopping food from reaching Jantar Mantar. The other was made when @Wangchuk66 was forcefully picked up.@Meta - I know this govt fears us, but last I checked, you were still preaching about free… pic.twitter.com/8wzVzxRr6r
ಆಶುತೋಷ್ ರಾಂಕಾ ಕೂಡ ತಮ್ಮ ಹಲವು ವೀಡಿಯೋಗಳು ಭಾರತದಲ್ಲಿ ನಿರ್ಬಂಧಕ್ಕೊಳಗಾಗಿವೆ ಎಂದು ಹೇಳಿದ್ದಾರೆ. ಅವುಗಳಲ್ಲಿ ಪ್ರತಿಭಟನಾಕಾರರಿಗೆ ಆಹಾರ ತಲುಪದಂತೆ ಪೊಲೀಸರು ತಡೆದ ಘಟನೆ ಹಾಗೂ ಸೋನಂ ವಾಂಗ್ಚುಕ್ ಅವರನ್ನು ಪೊಲೀಸರು ಕರೆದೊಯ್ದ ದೃಶ್ಯಗಳಿದ್ದವು ಎಂದು ಅವರು ತಿಳಿಸಿದ್ದಾರೆ. ಸಾಕ್ಷಿ ಅವರು CJP ಪ್ರತಿಭಟನೆಗೆ ಸಂಬಂಧಿಸಿದ ನಾಲ್ಕು ರೀಲ್ಸ್ ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಒಂದು ರೀಲನ್ನು ಇನ್ಸ್ಟಾಗ್ರಾಂನ ‘adult sexual exploitation’ ನೀತಿಯಡಿ ಫ್ಲ್ಯಾಗ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
Internet Freedom Foundation ಕೂಡ ಪ್ರತಿಭಟನೆಗೆ ಸಂಬಂಧಿಸಿದ ಇನ್ಸ್ಟಾಗ್ರಾಂ ಕಂಟೆಂಟ್ ಗಳ visibility ಮತ್ತು ರೀಚ್ ಕುರಿತಾಗಿ ಬಳಕೆದಾರರಿಂದ ಬಂದಿರುವ ದೂರುಗಳನ್ನು ಉಲ್ಲೇಖಿಸಿ ಮೆಟಾದಿಂದ ಹೆಚ್ಚಿನ ಪಾರದರ್ಶಕತೆ ಅಗತ್ಯ ಎಂದು ಹೇಳಿದೆ.
Turns out my content on Instagram too was restricted in India. What is this blanket ban on protest related and Modi related content? It is unconstitutional and illegal. It is absolutely ridiculous.
— Saurav Das (@SauravDassss) August 6, 2026
We appeal to @Meta to not succumb to such high-handed pressure from the… pic.twitter.com/GxjQ70kx9q
ಈ ಬೆಳವಣಿಗೆಗಳು ಮೆಟಾ ಮತ್ತು ಕೇಂದ್ರ ಸರಕಾರದ ನಡುವಿನ ಇತ್ತೀಚಿನ ಸಂಘರ್ಷದ ಹಿನ್ನೆಲೆಯಲ್ಲೇ ನಡೆಯುತ್ತಿವೆ. ಜುಲೈ 23ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಪೋಸ್ಟ್ವೊಂದನ್ನು ಮೆಟಾ ತೆಗೆದುಹಾಕಿತ್ತು. ಇದಕ್ಕೆ ಸಂಸದೀಯ ಸ್ಥಾಯಿ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೆಟಾ CEO ಮಾರ್ಕ್ ಝುಕರ್ಬರ್ಗ್ ರಿಂದ ಕ್ಷಮೆಯಾಚನೆಗೆ ಗಡುವು ನೀಡಿತ್ತು. ಭಾರತದಲ್ಲಿ ಮೆಟಾ ಹೊಂದಿರುವ ‘safe harbour’ ರಕ್ಷಣೆಯನ್ನು ಹಿಂಪಡೆಯುವ ಸಾಧ್ಯತೆಯನ್ನೂ ಸಮಿತಿ ಎಚ್ಚರಿಸಿತ್ತು. ಬಳಿಕ ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್ ಕಪ್ಲಾನ್ ಭಾರತಕ್ಕೆ ಆಗಮಿಸಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕಂಪೆನಿಯ ಪರವಾಗಿ ಕ್ಷಮೆಯಾಚಿಸಿದ್ದರು.
ಇದರ ನಡುವೆ, ಕೆಲವು ಬಳಕೆದಾರರು ತಮ್ಮ ಕಂಟೆಂಟ್ ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ; ಆದರೆ ಅದರ ರೀಚ್ ಗಣನೀಯವಾಗಿ ಕುಸಿದಿದೆ, Explore ಅಥವಾ Reels Feedನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಮತ್ತು Recommended Contentನಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇಂತಹ visibility ಕಡಿತವನ್ನು ಸಾಮಾನ್ಯವಾಗಿ ‘shadow banning’ ಎಂದು ಕರೆಯಲಾಗುತ್ತದೆ. ಆದರೆ, ಈ ನಿರ್ದಿಷ್ಟ ಪ್ರಕರಣಗಳಲ್ಲಿ Meta ಉದ್ದೇಶಪೂರ್ವಕವಾಗಿ ರೀಚ್ ಕಡಿಮೆ ಮಾಡಿದೆ ಎಂಬುದನ್ನು ಸ್ವತಂತ್ರವಾಗಿ ದೃಢೀಕರಿಸಲು ಸದ್ಯ ಸಾಕಷ್ಟು ಪುರಾವೆ ಇಲ್ಲ. ಡಿಜಿಟಲ್ ಯುಗದಲ್ಲಿ ಕಂಟೆಂಟ್ ತೆಗೆದುಹಾಕುವುದೇ ನಿಯಂತ್ರಣದ ಏಕೈಕ ರೂಪವಲ್ಲ. ಒಂದು ಪೋಸ್ಟ್ ವೇದಿಕೆಯಲ್ಲಿ ಉಳಿದಿದ್ದರೂ ಅದರ visibility ಮತ್ತು ರೀಚ್ ಕಡಿಮೆಯಾದರೆ, ಅದು ಸಾರ್ವಜನಿಕ ಚರ್ಚೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಈ ಎಲ್ಲ ನಿರ್ಬಂಧಗಳ ಹಿಂದೆ ಕೇಂದ್ರ ಸರಕಾರದ ನೇರ ಹಸ್ತಕ್ಷೇಪವಿದೆ ಎಂಬುದಕ್ಕೆ ಸದ್ಯ ನೇರ ಪುರಾವೆ ಇಲ್ಲ. ಆದರೆ, ನಿರ್ಬಂಧಕ್ಕೊಳಗಾದ ಹಲವು ಪೋಸ್ಟ್ ಗಳು ಮತ್ತು ಖಾತೆಗಳು ಕೇಂದ್ರ ಸರಕಾರದ ನೀತಿಗಳು ಅಥವಾ ಬಿಜೆಪಿ ನಾಯಕರನ್ನು ಟೀಕಿಸುವ ಕಂಟೆಂಟ್ ಹೊಂದಿದ್ದವು ಎಂಬುದು ಗಮನಾರ್ಹ.
Altnews ಮಾಡಿರುವ ವರದಿ ಪ್ರಕಾರ, CJP ಚಳವಳಿಯ ಸಂದರ್ಭದಲ್ಲಿ ಪೊಲೀಸರು ವಿವಿಧ ನಗರಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ, ವಶಕ್ಕೆ ಪಡೆಯುತ್ತಿದ್ದ ವೇಳೆಯಲ್ಲೇ, ಸರಕಾರವು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 79(3)(b) ಅಥವಾ ಸೆಕ್ಷನ್ 69A ಅಡಿಯಲ್ಲಿ ನೀಡಿರಬಹುದಾದ ನೋಟಿಸ್ಗಳ ಮೂಲಕ ಇನ್ಸ್ಟಾಗ್ರಾಂನಲ್ಲಿನ ಕಂಟೆಂಟ್ ಗಳನ್ನು ತೆಗೆಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಆದರೆ ಈ ನೋಟಿಸ್ಗಳು ಯಾವ ಸೆಕ್ಷನ್ ಅಡಿಯಲ್ಲಿ, ಯಾವ ಪ್ರಕ್ರಿಯೆಯ ಮೂಲಕ ನೀಡಲಾಗುತ್ತಿವೆ ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ.
ಈ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣದ ಆರೋಪಗಳು ಭಾರತದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುತ್ತಿವೆ. 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳಲ್ಲಿ 157ನೇ ಸ್ಥಾನದಲ್ಲಿದ್ದು, 31.96 ಅಂಕಗಳನ್ನು ಪಡೆದಿದೆ; 2025ರಲ್ಲಿ ಭಾರತ 151ನೇ ಸ್ಥಾನದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ, ಪತ್ರಿಕಾ ಮಾಧ್ಯಮದ ಹೊರತಾಗಿ ಇನ್ಸ್ಟಾಗ್ರಾಂನಂತಹ ಡಿಜಿಟಲ್ ವೇದಿಕೆಗಳಲ್ಲೂ ಕಂಟೆಂಟ್ ನಿರ್ಬಂಧದ ಆರೋಪಗಳು ಕೇಳಿಬರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ CJPಯಂತಹ ಯುವಜನರ ಚಳವಳಿಗಳು ಸಾಮಾಜಿಕ ಮಾಧ್ಯಮದ ಮೂಲಕವೇ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತಿರುವಾಗ, ಯಾವ ಕಂಟೆಂಟ್ ಜನರಿಗೆ ತಲುಪಬೇಕು ಮತ್ತು ಯಾವುದು ತಲುಪಬಾರದು ಎಂಬುದರ ಮೇಲೆ ನಿಯಂತ್ರಣ ಹೆಚ್ಚಾದರೆ, ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಚರ್ಚೆಯ ಸ್ವರೂಪದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ.
ಸೌಜನ್ಯ: altnews.in






