ಪಶ್ಚಿಮ ಬಂಗಾಳ | ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ʼಅಪರಾಜಿತಾ ಮಸೂದೆʼಯನ್ನು ವಾಪಾಸು ಕಳುಹಿಸಿದ ರಾಜ್ಯಪಾಲ

Photo Credit: ANI
ಕೊಲ್ಕತ್ತಾ: ಕೇಂದ್ರ ಸರಕಾರ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಗೆ ಬದಲಾವಣೆಗಳನ್ನು ತರುವ ಉದ್ದೇಶದ ʼಅಪರಾಜಿತಾ ಮಸೂದೆʼಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಮರು ಪರಿಶೀಲನೆಗಾಗಿ ವಿಧಾನಸಭೆಗೆ ವಾಪಾಸು ಕಳುಹಿಸಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳು ಹೇಳಿರುವ ಬಗ್ಗೆ ವರದಿಯಾಗಿದೆ.
2024ರ ಸೆಪ್ಟೆಂಬರ್ನಲ್ಲಿ ಆಂಗೀಕರಿಸಲ್ಪಟ್ಟ ಅಪರಾಜಿತ ಮಹಿಳಾ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಅಪರಾಧ ಕಾನೂನುಗಳ ತಿದ್ದುಪಡಿ) ಮಸೂದೆಯು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯಸಂಹಿತೆಯ ಹಲವು ಸೆಕ್ಷನ್ಗಳಲ್ಲಿ ಬದಲಾವಣೆಯನ್ನು ತರಲು ಉದ್ದೇಶಿಸಿದೆ. ಇದು ತೀರಾ ಕಠಿಣ ಹಾಗೂ ಪ್ರಮಾಣಾನುಸಾರವಲ್ಲದ ಶಿಕ್ಷೆ ವಿಧಿಸಲು ಪ್ರಸ್ತಾವಿಸಿದೆ ಎಂದು ಕೇಂದ್ರ ಸರಕಾರ ಆಕ್ಷೇಪಿಸಿದೆ.
ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 64ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸಿರುವುದು ವಿವಾದದ ಪ್ರಮುಖ ಅಂಶವಾಗಿದೆ. ರಾಜ್ಯದ ಮಸೂದೆಯ ಪ್ರಕಾರ ಅತ್ಯಾಚಾರ ಆರೋಪಿಗಳಿಗೆ ಇರುವ ಕನಿಷ್ಠ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಂದ ತಪ್ಪಿತಸ್ಥನ ಸಹಜ ಜೀವನಾವಧಿಯವರೆಗೆ ಅಥವಾ ಮರಣ ದಂಡನೆ ವಿಧಿಸುವವರೆಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಈ ಶಿಕ್ಷೆಯನ್ನು ನ್ಯಾಯಸಮ್ಮತವಲ್ಲದ ಕಠಿಣ ಮತ್ತು ಪ್ರಮಾಣಾನುಸಾರ ತತ್ವಕ್ಕೆ ಅನುಸಾರವಲ್ಲದ ಕ್ರಮ ಎಂದು ವಿಶ್ಲೇಷಿಸಿದೆ.
ಅದೇ ರೀತಿ ಬಿಎನ್ಎಸ್ ಸೆಕ್ಷನ್ 65ನ್ನು ರದ್ದುಪಡಿಸುವ ಪ್ರಸ್ತಾವದ ಬಗ್ಗೆಯೂ ಗೃಹ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಈ ಸೆಕ್ಷನ್ ರದ್ದುಪಡಿಸುವುದರಿಂದ ದುರ್ಬಲ ವರ್ಗದ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅತ್ಯಾಚಾರ ಕಾನೂನುಗಳಲ್ಲಿನ ವಯೋ ಆಧರಿತ ವರ್ಗೀಕರಣದ ಹಿಂದಿನ ಉದ್ದೇಶವನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಹೇಳಿದೆ.







