ರಾಜ್ಯಪಾಲರಿಗೆ ಮಸೂದೆಗಳನ್ನು ಸುದೀರ್ಘವಾಗಿ ತಡೆ ಹಿಡಿಯುವ ಅಧಿಕಾರವಿಲ್ಲ : ಸುಪ್ರೀಂ ಕೋರ್ಟ್ಗೆ ತಿಳಿಸಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ರಾಷ್ಟ್ರಪತಿಗಳ ಶಿಫಾರಸನ್ನು ಆಧರಿಸಿ ನಡೆಯುತ್ತಿರುವ ವಿಚಾರಣೆಯ ವೇಳೆ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯಪಾಲರು ಮಸೂದೆಗಳನ್ನು ಸುದೀರ್ಘವಾಗಿ ಬಾಕಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು. ಆದರೆ, ಮಸೂದೆಗಳಿಗೆ ನಿಗದಿತ ಸಮಯಮಿತಿಯನ್ನು ವಿಧಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲವೆಂದು ಅವರು ವಾದ ಮಂಡಿಸಿದರು.
ಮೆಹ್ತಾ ಅವರು ಸಂವಿಧಾನದ ವಿಧಿ 200ರಲ್ಲಿ ಬಳಕೆಯಾದ “ಸಾಧ್ಯವಾದಷ್ಟು ಬೇಗ” ಎಂಬ ಪದಪ್ರಯೋಗವನ್ನು ಉಲ್ಲೇಖಿಸಿ, ಅದು ಮಸೂದೆಗಳನ್ನು ವರ್ಷಗಟ್ಟಲೆ ತಡೆಹಿಡಿಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. 2005ರಿಂದಲೂ ಲಭ್ಯವಿರುವ ದತ್ತಾಂಶದ ಪ್ರಕಾರ, ಸುಮಾರು 90% ಮಸೂದೆಗಳಿಗೆ ಒಂದು ತಿಂಗಳೊಳಗೆ ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಕೇವಲ ಸಂಕೀರ್ಣ ಅಥವಾ ವಿವಾದಾತ್ಮಕ ವಿಷಯಗಳಿದ್ದಾಗ ಮಾತ್ರ ವಿಳಂಬವಾಗುತ್ತದೆ ಎಂದು ಅವರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ತಮಿಳುನಾಡಿನಲ್ಲಿಯೂ ಹೆಚ್ಚಿನ ಮಸೂದೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು.
“ಮಸೂದೆಗಳಿಗೆ ನಿಗದಿತ ಕಾಲಮಿತಿ ನೀಡದಿರುವುದೇ ಸಂವಿಧಾನಾತ್ಮಕ ಕ್ರಮ. ಇದು ಜಾಣ್ಮೆಯಿಂದ ತೆಗೆದುಕೊಂಡ ನಿರ್ಧಾರ. ಒಂದು ಸಂವಿಧಾನಿಕ ಹುದ್ದೆಯಾದ ರಾಜ್ಯಪಾಲರಿಗೆ ಇನ್ನೊಬ್ಬರು ನೇರ ಆದೇಶ ನೀಡಲು ಸಾಧ್ಯವಿಲ್ಲ,” ಎಂದು ಮೆಹ್ತಾ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, “ಅಧಿಕಾರ ಎಷ್ಟೇ ಉನ್ನತವಾಗಿದ್ದರೂ ಕಾನೂನು ಅವರ ಮೇಲಿರುತ್ತದೆ. ಸಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ, ಮೂಲಭೂತ ಹಕ್ಕುಗಳ ಪಾಲಕನಾಗಿ ನ್ಯಾಯಾಲಯ ಸಂಪೂರ್ಣ ಹೀನಾಯ ಸ್ಥಿತಿಗೆ ತಲುಪಬೇಕಾಗುತ್ತದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.
“ಸಾಧ್ಯವಾದಷ್ಟು ಬೇಗ ಎಂದರೆ ಅದಕ್ಕೆ ಸಮಯ ಮಿತಿ ಇಲ್ಲ ಎಂದರ್ಥವಲ್ಲ. ಪ್ರತಿಯೊಂದು ಮಸೂದೆಗೂ ಸಂದರ್ಭಾನುಸಾರ ಪರಿಶೀಲನೆ ಅಗತ್ಯ. ಸಮಯಮಿತಿಗಳನ್ನು ಹೇರಿದರೆ, ಸಂವಿಧಾನಾತ್ಮಕ ಸಹಕಾರದ ಆತ್ಮಸತ್ವವೇ ಹಾನಿಗೊಳಗಾಗುತ್ತದೆ", ಎಂದು ಮೆಹ್ತಾ ತಮ್ಮ ಅಂತಿಮ ವಾದದಲ್ಲಿ ಹೇಳಿದರು.
ಮುಖ್ಯ ನ್ಯಾಯಮೂರ್ತಿ ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಒಳಗೊಂಡ ಐವರು ಸದಸ್ಯರ ಸಂವಿಧಾನಿಕ ಪೀಠವು ಈ ಕುರಿತು ವಿಚಾರಣೆಯನ್ನು ಮುಂದುವರಿಸುತ್ತಿದೆ.







