ʼರಾಜ್ಯಪಾಲರು ಬಾಸ್ ಅಲ್ಲʼ: ಅಧಿಕಾರ ಕಚ್ಚಾಟದ ನಡುವೆ ರಾಜ್ಯಪಾಲರನ್ನು ಎದುರಿಸಲು ಪಠ್ಯಪುಸ್ತಕವನ್ನು ಆಯ್ದುಕೊಂಡ ಕೇರಳ ಸರಕಾರ!

PC - indiatoday
ತಿರುವನಂತಪುರ: ಕಪ್ಪು ಬಾವುಟಗಳ ಮೆರವಣಿಗೆಯಿಂದ ಹಿಡಿದು ರಾಜಭವನಕ್ಕೆ ಬಹಿಷ್ಕಾರಗಳು ಮತ್ತು ಬೀದಿಗಳಲ್ಲಿ ಧರಣಿಗಳವರೆಗೆ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಗಳು ಮಾಮೂಲಾಗಿವೆ. ಹಾಲಿ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅಥವಾ ಅವರ ಪೂರ್ವಾಧಿಕಾರಿ ಆರಿಫ್ ಮುಹಮ್ಮದ್ ಖಾನ್ ಆಗಿರಲಿ, ರಾಜಭವನದೊಂದಿಗೆ ತನ್ನ ಕಚ್ಚಾಟದಲ್ಲಿ ರಾಜ್ಯಪಾಲರನ್ನು ಎದುರಿಸಲು ಈಗ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರವು ಪಠ್ಯಪುಸ್ತಕ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು India Today ವರದಿ ಮಾಡಿದೆ.
ಬುಧವಾರ ಕೇರಳ ಸರಕಾರವು 10ನೇ ತರಗತಿಯ ಸಮಾನ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಪ್ರಜಾಪ್ರಭುತ್ವ:ಭಾರತೀಯ ಅನುಭವ’ ಅಧ್ಯಾಯದಡಿ ರಾಜ್ಯಪಾಲರ ಅಧಿಕಾರಗಳು ಮತ್ತು ಕರ್ತವ್ಯಗಳ ಕುರಿತು ನಾಲ್ಕು ಪುಟಗಳ ಪಠ್ಯಭಾಗವೊಂದನ್ನು ಸೇರಿಸಿದೆ. ರಾಜ್ಯಪಾಲರು ‘ಬಾಸ್ ಅಲ್ಲ ’, ಅವರು ಚುನಾಯಿತರಲ್ಲದ ‘ನಾಮಮಾತ್ರ ಮುಖ್ಯಸ್ಥ’ ಎಂದು ಇದರಲ್ಲಿ ಬಣ್ಣಿಸಲಾಗಿದ್ದು, ನಿಜವಾದ ಅಧಿಕಾರವು ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟದ ಬಳಿಯಿದೆ ಎಂದು ಹೇಳಲಾಗಿದೆ.
ರಾಜ್ಯಪಾಲರ ಅಧಿಕಾರಗಳ ಕುರಿತು ಪಾಠಗಳನ್ನು ಸೇರಿಸಲು ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಅವರು ಈ ಹಿಂದೆ ಪ್ರಕಟಿಸಿದ್ದರು.
ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಆಗಾಗ್ಗೆ ರಾಜ್ಯಪಾಲರ ವಿವಾದಾತ್ಮಕ ಪಾತ್ರವನ್ನು ಎತ್ತಿ ತೋರಿಸಿರುವ ಈ ಪಠ್ಯಭಾಗವು, ರಾಜ್ಯಪಾಲರು ಚುನಾಯಿತ ವ್ಯಕ್ತಿಯಲ್ಲ, ಬದಲಿಗೆ ಕೇಂದ್ರ ಸರಕಾರದ ಶಿಫಾಸಿನ ಮೇರೆಗೆ ರಾಷ್ಟ್ರಪತಿಗಳಿಂದ ನೇಮಕಗೊಳ್ಳುತ್ತಾರೆ ಎನ್ನುವುದನ್ನು ಬೆಟ್ಟು ಮಾಡಿದೆ. ಸಕ್ರಿಯ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಬಾರದು ಎಂಬ ಸರ್ಕಾರಿಯಾ ಆಯೋಗದ ಶಿಫಾರಸನ್ನೂ ಅದು ನೆನಪಿಸಿದೆ.
ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ಅವುಗಳಿಗೆ ಅಂಕಿತ ಹಾಕುವುದು, ಮರಳಿಸುವುದು ಅಥವಾ ಅವುಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸುವುದು; ಹೀಗೆ ಕೇವಲ ಮೂರು ಆಯ್ಕೆಗಳನ್ನು ರಾಜ್ಯಪಾಲರು ಹೊಂದಿರುತ್ತಾರೆ. ವಾಪಸ್ ಮಾಡಲಾದ ಮಸೂದೆಯನ್ನು ವಿಧಾನಸಭೆಯು ಮತ್ತೊಮ್ಮೆ ಅಂಗೀಕರಿಸಿದರೆ ಅದಕ್ಕೆ ರಾಜ್ಯಪಾಲರು ಸಹಿ ಹಾಕುವುದು ಅಗತ್ಯವಾಗಿದೆ ಎಂದು ಪಠ್ಯಭಾಗದಲ್ಲಿ ಹೇಳಲಾಗಿದೆ.
ಈ ಅಧ್ಯಾಯವು ರಾಜ್ಯಪಾಲರ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ವಿವೇಚನಾ ಅಧಿಕಾರಗಳನ್ನು ವಿವರಿಸಿದ್ದು, ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರತಿಯೊಬ್ಬರೂ ಅದನ್ನು ಓದಬೇಕು ಎಂದು ಶಿವನ್ಕುಟ್ಟಿ ಬುಧವಾರ ಹೇಳಿದರು.







