"ಸರಕಾರಕ್ಕೆ ನಿಮ್ಮ ಜೀವದ ಬಗ್ಗೆ ಯಾವುದೇ ಕಾಳಜಿಯಿಲ್ಲ": ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಸೋನಂ ವಾಂಗ್ಚುಕ್ ಗೆ ಮಹುವಾ ಮೊಯಿತ್ರಾ ಮನವಿ

ಮಹುವಾ ಮೊಯಿತ್ರಾ , ಸೋನಂ ವಾಂಗ್ಚುಕ್ | Photo Credit : PTI
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯ ಜಂತರ್ ಮಂತರ್ ನಲ್ಲಿ ಹವಾಮಾನ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 17ನೇ ದಿನಕ್ಕೆ ಕಾಲಿರಿಸಿದೆ. ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿರುವುದರಿಂದ, ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸುವಂತೆ ಅನೇಕ ಗಣ್ಯರು ಸೋನಂ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿಯ ಕುರಿತು ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೊಸದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. “ಸೋನಂ ವಾಂಗ್ಚುಕ್ ಅವರು ತೂಕ ಕಳೆದುಕೊಳ್ಳಲು ಪ್ರಾರಂಭಿಸಿದ್ದು, ಅವರು ಅಪಾರ ನೋವಿನಲ್ಲಿದ್ದಾರೆ” ಎಂದು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
“ಸೋನಂ ವಾಂಗ್ಚುಕ್ ಇಲ್ಲಿಯವರೆಗೆ 8.5 ಕೆಜಿ ತೂಕ ಕಳೆದುಕೊಂಡಿದ್ದು, ಅವರ ರಕ್ತದೊತ್ತಡ ಸಹಜ ಸ್ಥಿತಿಯಲ್ಲಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಸೋನಂ ವಾಂಗ್ಚುಕ್ ರೊಂದಿಗೆ ನಡೆದ ಕ್ಲುಪ್ತ ಮಾತುಕತೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಅವರಿಗೆ ತಾನು ಮನವಿ ಮಾಡುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.
“ಸೋನಂ ವಾಂಗ್ಚುಕ್ ಅವರು ತೂಕ ಕಳೆದುಕೊಳ್ಳಲು ಪ್ರಾರಂಭಿಸಿದ್ದು, ಅಪಾರ ನೋವಿನಲ್ಲಿದ್ದಾರೆ. ಎಲ್ಲರಂತೆ ನಾನೂ ಕೂಡಾ ಅವರಲ್ಲಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವಂತೆ ಬೇಡಿಕೊಂಡೆ. ಅದಕ್ಕವರು “ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವಂತೆ ನನಗೆ ಹೇಳಬೇಡಿ. ಸರಕಾರವೇಕೆ ಮಾತುಕತೆಯನ್ನೂ ನಡೆಸುತ್ತಿಲ್ಲ ಎಂದು ಅವರನ್ನು ಪ್ರಶ್ನಿಸಿ” ಎಂದು ಶಾಂತಚಿತ್ತರಾಗಿ ಉತ್ತರಿಸಿದರು” ಎಂದು ಅಭಿಜೀತ್ ದೀಪ್ಕೆ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
“ವ್ಯಕ್ತಿಯೊಬ್ಬರ ಜೀವ ಅಪಾಯದಲ್ಲಿರುವ ಹೊತ್ತಿನಲ್ಲಿ ಇದನ್ನು ಪ್ರತಿಷ್ಠೆಯ ಹೋರಾಟವನ್ನಾಗಿ ಪರಿವರ್ತಿಸಬೇಡಿ” ಎಂದೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿರುವ ಅಭಿಜೀತ್ ದೀಪ್ಕೆ, “ಉತ್ತರದಾಯಿತ್ವಕ್ಕಾಗಿ ಮಾತ್ರ ಈ ಪ್ರತಿಭಟನೆ ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ 25 ದಿನಕ್ಕೆ ತಲುಪಿದ್ದು, ಸೋನಂ ವಾಂಗ್ಚುಕ್ ಅವರು ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 17ನೇ ದಿನಕ್ಕೆ ಕಾಲಿರಿಸಿದೆ.
ಸೋಮವಾರ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಆಪ್ ನಿಯೋಗ, ಹೋರಾಟಕ್ಕೆ ತನ್ನ ಬೆಂಬಲವನ್ನು ಸೂಚಿಸಿತು.
ಈ ನಡುವೆ, ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಿಪಿಎಂ ಸಂಸದ ಅಮ್ರಾ ರಾಮ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವಾರು ರಾಜಕೀಯ ಪಕ್ಷದ ನಾಯಕರು ಹಾಗೂ ಗಣ್ಯರು ಸೋನಂ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.
“ಸೋನಂ ಸರ್, ಈ ನಿಮ್ಮ ಉಪವಾಸ ಸತ್ಯಾಗ್ರಹ ದೇಶದ ಯುವಜನತೆಯನ್ನು ಈ ನ್ಯಾಯಕ್ಕಾಗಿನ ಹೋರಾಟದಲ್ಲಿ ಒಂದುಗೂಡಿಸಿದೆ. ನೀವು ನಿಮ್ಮ ಗುರಿಯನ್ನು ತಲುಪಿದ್ದೀರಿ. ಸರಕಾರಕ್ಕೆ ನಿಮ್ಮ ಜೀವದ ಬಗ್ಗೆಯಾಗಲಿ ಅಥವಾ ಕೋಟ್ಯಂತರ ಯುವಕರ ಬಗ್ಗೆಯಾಗಲಿ ಯಾವುದೇ ಕಾಳಜಿಯಿಲ್ಲ. ಆದರೆ, ನಿಮ್ಮ ಜೀವ ಅಮೂಲ್ಯವಾಗಿದೆ. ದಯವಿಟ್ಟು ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸಿ, ನಿಮ್ಮ ಹೋರಾಟವನ್ನು ಮುಂದುವರಿಸಿ” ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಮನವಿ ಮಾಡಿದ್ದಾರೆ.






