ಪ್ರತಿಭಟನೆಯ ನಂತರ ಸಂಸತ್ತಿನ ಕಾರ್ಯಸೂಚಿಯಿಂದ ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಮಸೂದೆ ಕೈಬಿಟ್ಟ ಸರಕಾರ: ವರದಿ

Photo: PTI
ಹೊಸದಿಲ್ಲಿ: ರವಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸರಕಾರವು ಪ್ರತಿಪಕ್ಷಗಳಿಗೆ ನೀಡಿರುವ ಎಂಟು ವಿಧೇಯಕಗಳ ಪಟ್ಟಿಯಲ್ಲಿ ಉನ್ನತ ಚುನಾವಣಾ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದ ವಿವಾದಾತ್ಮಕ ಮಸೂದೆಯನ್ನ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮುನ್ನಾದಿನವಾದ ರವಿವಾರ ಸಭೆ ನಡೆಸಲಾಯಿತು.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನದಿಂದ ತೆಗೆದುಹಾಕುವ ಮಸೂದೆಗೆ ವಿರೋಧ ವ್ಯಕ್ತವಾಗಿತ್ತು. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರುಗಳ ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳು ಕ್ಯಾಬಿನೆಟ್ ಕಾರ್ಯದರ್ಶಿಯಂತೆಯೇ ಇರುತ್ತವೆ ಎಂದು ಮಸೂದೆ ಪ್ರಸ್ತಾಪಿಸುತ್ತದೆ, ಇದನ್ನು ನಿನ್ನೆ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳು ವಿರೋಧಿಸಿದ್ದವು.
ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತ, ಇತರ ಚುನಾವಣಾ ಆಯುಕ್ತರನ್ನು ನೇಮಿಸಲು ರಾಷ್ಟ್ರಪತಿಗೆ ಸಲಹೆ ನೀಡುವ ಸಮಿತಿಯಲ್ಲಿರುವ ಭಾರತದ ಮುಖ್ಯ ನ್ಯಾಯಾಧೀಶರನ್ನು ಬದಲಿಸಲು ಪ್ರಯತ್ನಿಸುತ್ತದೆ. ಸಮಿತಿಯು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು ಎಂದು ಮಾರ್ಚ್ ನಲ್ಲಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಇದು ವ್ಯತಿರಿಕ್ತವಾಗಿದೆ.
ಈ ನಿಬಂಧನೆಯನ್ನು ವಿರೋಧ ಪಕ್ಷಗಳು ಬಲವಾಗಿ ವಿರೋಧಿಸಿದ್ದವು, ಇದು ಚುನಾವಣೆಯ ನ್ಯಾಯಸಮ್ಮತತೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಆರೋಪಿಸಿದ್ದವು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ ಮತ್ತು ಇದು "ಅತ್ಯಂತ ಅಪಾಯಕಾರಿ ಪರಿಸ್ಥಿತಿ" ಎಂದು ಹೇಳಿದ್ದಾರೆ.
ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಸೂದೆಯನ್ನು ಪ್ರಸ್ತಾಪಿಸಲಿಲ್ಲ.