ಗ್ರೇಟ್ ನಿಕೊಬಾರ್ ಯೋಜನೆ | ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಆರೋಪಿಸಿ ಸಲ್ಲಿಸಿದ PIL ಎತ್ತಿ ಹಿಡಿದ ಕಲ್ಕತ್ತಾ ಹೈಕೋರ್ಟ್

ಕಲ್ಕತ್ತಾ ಹೈಕೋರ್ಟ್ | Photo Credit : PTI
ಕೋಲ್ಕತ್ತಾ, ಮೇ 8: ಗ್ರೇಟ್ ನಿಕೊಬಾರ್ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎತ್ತಿ ಹಿಡಿದಿರುವ ಕಲ್ಕತ್ತಾ ಹೈಕೋರ್ಟ್, ಅರ್ಜಿದಾರರು ಸ್ಥಳೀಯ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ನಿವಾಸಿಯಲ್ಲ, ಬದಲಿಗೆ ಹೈದರಾಬಾದ್ ನಿವಾಸಿ ಎಂಬ ಕೇಂದ್ರ ಸರಕಾರದ ವಾದವನ್ನು ತಳ್ಳಿ ಹಾಕಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಸ್ಥಳೀಯರೇ ಆಗಿರಬೇಕು ಎಂಬ ಯಾವುದೇ ಸ್ಥಾಪಿತ ನಿಯಮವಿಲ್ಲ ಹಾಗೂ ದುರ್ಬಲ ಸಮುದಾಯಗಳಿಗೆ ತೊಂದರೆಯುಂಟಾಗುವ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯಡಿ ಅಂತಹ ಯೋಜನೆಯಿಂದ ಸಂತ್ರಸ್ತರಾಗದವರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸುಜೋಯ್ ಪೌಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಸಲ್ಲಿಸಿದ ಪ್ರಾಥಮಿಕ ಆಕ್ಷೇಪಣೆಯನ್ನು ತಳ್ಳಿ ಹಾಕಿದ ನ್ಯಾಯಾಲಯ, “ನಿಯಮ 56ರ ಅನ್ವಯ, ಯಾವುದೇ ವ್ಯಕ್ತಿ ಅಥವಾ ಜನರ ವರ್ಗ ಬಡತನ, ಅಸಹಾಯಕತೆ ಅಥವಾ ಅಂಗವೈಕಲ್ಯ ಅಥವಾ ಸಾಮಾಜಿಕ ಅಥವಾ ಆರ್ಥಿಕ ಅನನುಕೂಲ ಪರಿಸ್ಥಿತಿಯಲ್ಲಿರುವವರು ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಲು ವಿಫಲರಾದಾಗ, ಯಾವುದೇ ಸಾರ್ವಜನಿಕ ವ್ಯಕ್ತಿ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿತು.
ಆದಿವಾಸಿ ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ, 2006ರ ಉಲ್ಲಂಘನೆ ಮತ್ತು ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಪರಿಸರ ಸೂಕ್ಷ್ಮ ಬಫರ್ ವಲಯಗಳ ಕಡಿತ ಸೇರಿದಂತೆ ಗ್ರೇಟ್ ನಿಕೊಬಾರ್ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸರಕಾರದ ವಿವಿಧ ಕ್ರಮಗಳನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಮೀನಾ ಗುಪ್ತ ಸಲ್ಲಿಸಿರುವ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.






