Maharashtra | ಟಿಫಿನ್ ನಲ್ಲಿ ‘ಮೆಂತ್ಯ ಸೊಪ್ಪು’ ತಂದಿದ್ದಕ್ಕೆ ವಿದ್ಯಾರ್ಥಿಗೆ ದಂಡ; ಶಾಲೆ ವಿರುದ್ಧ ನೋಟೀಸ್ ಜಾರಿ

Photo Credit : NDTV
ಮಹಾರಾಷ್ಟ್ರದ ಭಯಂದರ್ನಲ್ಲಿರುವ ಶಾಲೆಯೊಂದರಲ್ಲಿ ‘ಮೆಂತ್ಯ’ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಜೈನ ಧರ್ಮದ ‘ಪರ್ಯೂಷಣ’ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರು ಟಿಫಿನ್ ಬಾಕ್ಸ್ ನಲ್ಲಿ ಮೆಂತ್ಯ ಸೊಪ್ಪನ್ನು ತಂದಿದ್ದಕ್ಕಾಗಿ ಶುಲ್ಕ ವಿಧಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ತಂದಿದ್ದಕ್ಕಾಗಿಯೂ ಕ್ರಮ ಕೈಗೊಂಡಿದ್ದ ಆರೋಪಗಳು ಕೇಳಿ ಬಂದಿದ್ದವು ಎಂದು ವರದಿಯಾಗಿದೆ.
ಭಯಂದರ್ ಪೂರ್ವದಲ್ಲಿರುವ ತಪೋವನ ಶಾಲೆಯ ವಿದ್ಯಾರ್ಥಿಯೊಬ್ಬರು ಮನೆಯಿಂದ ಮೆಂತ್ಯದ ಖಾದ್ಯವನ್ನು ಟಿಫಿನ್ ನಲ್ಲಿ ತಂದಿದ್ದರು. ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಯ ದಿನಚರಿ ಪುಸ್ತಕದಲ್ಲಿ “ಮೆಂತ್ಯ ನಿಷೇಧಿತ ತರಕಾರಿ” ಎಂದು ಬರೆದಿದೆ ಎಂದು NDTV ವರದಿ ಮಾಡಿದೆ.
ವಿದ್ಯಾರ್ಥಿಗೆ ಮನೆಯಿಂದ ತಂದಿದ್ದ ಆಹಾರ ಸೇವಿಸಲು ಅನುಮತಿಸಲಿಲ್ಲ. ಬದಲಾಗಿ ಶಾಲೆಯ ಕ್ಯಾಂಟೀನ್ ನಿಂದ ಆಹಾರ ನೀಡಲಾಗಿದೆ. ಅದಕ್ಕಾಗಿ 20 ರೂ. ಶುಲ್ಕ ವಿಧಿಸಲಾಗಿದೆ.
ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾರಣದಿಂದ ಜೈನ ಧರ್ಮದ ವಾರ್ಷಿಕ ಪವಿತ್ರ ಆಚರಣೆಯಾದ ‘ಪರ್ಯೂಷಣ’ ಸಂದರ್ಭದಲ್ಲಿ ಅನುಸರಿಸುವ ಆಹಾರ ಪದ್ಧತಿಗಳ ಕಾರಣದಿಂದಾಗಿ ಗೆಡ್ಡೆ-ಗೆಣಸು ಮತ್ತು ಮೆಂತ್ಯದಂತಹ ಪದಾರ್ಥಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಶಾಲೆಯ ವಿರುದ್ಧ ಇಂತಹ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಇದೇ ಹಬ್ಬದ ಸಂದರ್ಭದಲ್ಲಿ ಟಿಫಿನ್ ನಲ್ಲಿ ಈರುಳ್ಳಿ, ಆಲೂಗಡ್ಡೆ, ಶುಂಠಿ, ಬೀಟ್ರೂಟ್ ಮತ್ತು ಕ್ಯಾರೆಟ್ ತಂದಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ 50 ರೂ. ದಂಡ ವಿಧಿಸಲಾಗುತ್ತಿತ್ತು ಎಂಬ ವರದಿಗಳು ಈ ಹಿಂದೆ ಬಂದಿದ್ದವು.
ಈ ದಂಡದ ಕುರಿತು ಮಹಾರಾಷ್ಟ್ರ ನವನಿರ್ಮಾಣ ಸೇನೆ ದೂರು ದಾಖಲಿಸಿತ್ತು. ದೂರಿನ ಮೇರೆಗೆ ಕ್ರಮ ಕೈಗೊಂಡಿರುವ ಮೀರಾ-ಭಯಂದರ್ ಮಹಾನಗರ ಪಾಲಿಕೆ ಶಿಕ್ಷಣಾಧಿಕಾರಿ ಸುಲ್ಭಾ ವಥಾರೆ ಅವರು ಸೆಪ್ಟೆಂಬರ್ 17ರಂದು ಶಾಲೆಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.
ಈ ವಿಷಯಕ್ಕೆ ಶಾಲೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.






