ವಿವಾಹ ವೇದಿಕೆಯಲ್ಲೇ ವರನಿಗೆ ಇರಿತ; ದಾಳಿಕೋರನನ್ನು 2 ಕಿಲೋಮೀಟರ್ ಬೆನ್ನಟ್ಟಿದ ಡ್ರೋನ್!

Screengrab : X
ಅಮರಾವತಿ: ವಿವಾಹ ವೇದಿಕೆಯಲ್ಲೇ ವರನಿಗೆ ಇರಿದ ದಾಳಿಕೋರನನ್ನು ವಿವಾಹ ಚಿತ್ರೀಕರಣಕ್ಕೆ ಆಗಮಿಸಿದ್ದ ಛಾಯಾಗ್ರಾಹಕನ ಡ್ರೋಣ್ ಎರಡು ಕಿಲೋಮೀಟರ್ ದೂರ ಬೆನ್ನಟ್ಟಿನ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ವಿವಾಹ ಸಮಾರಂಭದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಹಾರಾಷ್ಟ್ರದ ಅಮರಾವತಿಯಲ್ಲಿ ರಾಘೋ ಜಿತೇಂದ್ರಬಕ್ಷಿ ಎಂಬಾತ ವಿವಾಹ ವೇದಿಕೆಯಲ್ಲಿ ವರನಿಗೆ ಮೂರು ಬಾರಿ ಇರಿದು ಪರಾರಿಯಾಗಲ ಯತ್ನಿಸಿದ ಎಂದು ಹೇಳಲಾಗಿದೆ. ತಕ್ಷಣವೇ ವಿವಾಹದ ವಿಡಿಯೊಗ್ರಾಫರ್ ದಾಳಿಕೋರನನ್ನು ಡ್ರೋಣ್ ಸಹಾಯದಿಂದ ಬೆನ್ನಟ್ಟಿದ. ದಾಳಿಕೋರ ಹಾಗೂ ಮತ್ತೊಬ್ಬ ವ್ಯಕ್ತಿ ಮೋಟರ್ಸೈಕಲ್ನಲ್ಲಿ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಂತೆಯೇ ಎರಡು ಕಿಲೋಮೀಟರ್ ದೂರದವರೆಗೂ ಡ್ರೋಣ್ನಲ್ಲಿ ದಾಳಿಕೋರನನ್ನು ಬೆನ್ನಟ್ಟಲಾಯಿತು.
ಆ ಬಳಿಕ ಪೊಲೀಸರು ಡ್ರೋಣ್ ದೃಶ್ಯಾವಳಿಯ ತುಣುಕುಗಳನ್ನು ಪಡೆದು ಆರೋಪಿಯ ಗುರುತು ದೃಢಪಡಿಸಿದರು ಹಾಗೂ ತಪ್ಪಿಸಿಕೊಂಡ ಮಾರ್ಗವನ್ನು ಪತ್ತೆ ಮಾಡಿದರು. ಡಿಜೆ ಡ್ಯಾನ್ಸ್ ವೇಳೆ ನಡೆದ ಸಣ್ಣ ಜಗಳ ದಾಳಿಗೆ ಕಾರಣ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಗಾಯಾಳು ವರ ಸಜಲ್ರಾಮ್ ಸಮುದ್ರ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







