ಕಳ್ಳಭಟ್ಟಿ ಜಾಲ ಮತ್ತು ಭ್ರಷ್ಟ ಪೋಲಿಸರ ನಡುವಿನ ಮಾರಕ ಸಂಬಂಧ ಕಲ್ಲಕುರಿಚಿ ದುರಂತಕ್ಕೆ ಕಾರಣ
thenewsminute.com ಗ್ರೌಂಡ್ ರಿಪೋರ್ಟ್

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ 50ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ದುರಂತವು ಸ್ಥಳೀಯ ಕಳ್ಳಭಟ್ಟಿ ಮಾರಾಟಗಾರ ಮತ್ತು ಪೋಲಿಸರ ನಡುವಿನ ಕರಾಳ ಸಂಬಂಧವನ್ನು ಬಯಲಿಗೆಳೆದಿದೆ. ಪೋಲಿಸರು ಕಳ್ಳಭಟ್ಟಿ ಮಾರಾಟವನ್ನು ತಡೆಯುವ ಬದಲು ಬಹಿರಂಗವಾಗಿಯೇ ಅದನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರು. ಮೃತರಲ್ಲಿ ನಗರದ ಹೃದಯಭಾಗದಲ್ಲಿರುವ ಕರುಣಾಪುರಂ ದಲಿತ ಕಾಲನಿಯ 34 ನತದೃಷ್ಟರು ಸೇರಿದ್ದಾರೆ. ಆರೋಪಿ ಗೋವಿಂದರಾಜ ಅಲಿಯಾಸ್ ಕನ್ನುಕುಟ್ಟಿ ಹೆಚ್ಚುಕಡಿಮೆ ಒಬ್ಬನೇ ಹೇಗೆ ಪೋಲಿಸರ ಮೌನ ಸಮ್ಮತಿ ಮತ್ತು ತೋರಿಕೆಯ ದಾಳಿಗಳೊಂದಿಗೆ ಕರುಣಾಪುರಂನಲ್ಲಿ ದಿನದ 24 ಗಂಟೆಯೂ ಅಗ್ಗದ ಮೆಥೆನಾಲ್ ಮಿಶ್ರಿತ ಸಾರಾಯಿ ಪ್ಯಾಕೆಟ್‌ಗಳ ಮಾರಾಟ ಮಾಡುತ್ತ ಸಣ್ಣ ಪ್ರಮಾಣದ ಅಕ್ರಮ ಮದ್ಯ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದ ಎನ್ನುವುದನ್ನು ಸುದ್ದಿ ಜಾಲತಾಣ thenewsminute.com ನಡೆಸಿದ ತಳಮಟ್ಟದ ತನಿಖೆಯು ಬಹಿರಂಗಗೊಳಿಸಿದೆ.
ಕರುಣಾಪುರಂ ಮತ್ತು ಇತರ ಪ್ರದೇಶಗಳಲ್ಲಿಯ ಜನರು ಅಗ್ಗದ ದರ ಮತ್ತು ದಿನದ 24 ಗಂಟೆಯೂ ಲಭ್ಯತೆಯ ಕಾರಣದಿಂದ ತಮಿಳುನಾಡು ರಾಜ್ಯ ಮಾರಾಟ ನಿಗಮ (ಟಾಸ್ಮ್ಯಾಕ್)ನ ಅಧಿಕೃತ ಮದ್ಯಕ್ಕಿಂತ ಕನ್ನುಕುಟ್ಟಿಯ ಅಕ್ರಮ ಮದ್ಯದ ಪ್ಯಾಕೆಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ಕನ್ನುಕುಟ್ಟಿಯ ವ್ಯಾಪಾರ ನಸುಕಿನ ಮೂರು ಗಂಟೆಗೇ ಆರಂಭವಾಗುತ್ತಿತ್ತು ಮತ್ತು ಬೆಳಿಗ್ಗೆ ಬೇಗನೇ ಕೆಲಸಕ್ಕೆ ತೆರಳುತ್ತಿದ್ದವರಿಗೆ ಮೊದಲ ಸ್ಟಾಪ್ ಆಗಿತ್ತು.
ಕರುಣಾಪುರಂ 6,168 ಜನಸಂಖ್ಯೆಯನ್ನು ಹೊಂದಿದ್ದು,1,500 ಕುಟುಂಬಗಳಿವೆ. ಹೆಚ್ಚಿನವರು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ಅವರು ದಿನಕ್ಕೆ ಸರಾಸರಿ 300ರಿಂದ 500 ರೂ.ಗಳವರೆಗೆ ಗಳಿಸುತ್ತಾರೆ.
ಕಡಿಮೆ ಆದಾಯದಿಂದಾಗಿ ಈ ಜನರು 135ರಿಂದ 175 ರೂ.ನಡುವೆ ಬೆಲೆಯಲ್ಲಿ ಟ್ಯಾಸ್ಮಾಕ್ ಅಂಗಡಿಗಳಲ್ಲಿ ಮಾರಾಟವಾಗುವ ಮದ್ಯಕ್ಕಿಂತ 60-70 ರೂ.ಗಳಿಗೆ ದೊರೆಯುತ್ತಿದ್ದ ಕನ್ನುಕುಟ್ಟಿಯ ಪ್ಯಾಕೆಟ್ ಸಾರಾಯಿಯನ್ನೇ ಸೇವಿಸುತ್ತಿದ್ದರು ಎಂದು ಕರುಣಾಪುರಂ ನಿವಾಸಿ ಚಿನ್ನರಸು ತಿಳಿಸಿದರು.
ಈ ಪ್ರದೇಶದಲ್ಲಿ ಕೇವಲ ಎರಡು ಟ್ಯಾಸ್ಮಾಕ್ ಅಂಗಡಿಗಳಿದ್ದು,ಎರಡೂ ಒಂದು ಕಿ.ಮೀ.ಗಿಂತ ಹೆಚ್ಚು ದೂರದಲ್ಲಿವೆ. ಈ ಅಂಗಡಿಗಳು ತೆರೆಯುವ ವೇಳೆಗೆ ಮಧ್ಯಾಹ್ನ 12 ಗಂಟೆಯಾಗಿರುತ್ತದೆ ಮತ್ತು ರಾತ್ರಿ 10 ಗಂಟೆಗೆ ಮುಚ್ಚುತ್ತವೆ. ಹೀಗಾಗಿ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ದಿನಗೂಲಿಗೆ ತೆರಳುವವರಿಗೆ ಕನ್ನುಕುಟ್ಟಿ ಮನೆಯು ಮೊದಲ ಭೇಟಿಯ ತಾಣವಾಗಿತ್ತು ಎಂದು ಅವರು ಹೇಳಿದರು.
ಈ ಕಾರ್ಮಿಕರಿಗೆ ಕನ್ನುಕುಟ್ಟಿಯ ಮೆಥೆನಾಲ್ ಮಿಶ್ರಿತ ಮದ್ಯ ನೀಡುತ್ತಿದ್ದ ಕಿಕ್ ಅನ್ನು ಟ್ಯಾಸ್ಮಾಕ್‌ನ ಮದ್ಯ ನೀಡುತ್ತಿರಲಿಲ್ಲ. ಕೈಗಾರಿಕೆಗಳಲ್ಲಿ ಬಳಕೆಯಾಗುವ ಮೆಥೆನಾಲ್ ಅಥವಾ ಮಿಥೈಲ್ ಅಲ್ಕೋಹಾಲ್ ಮಾನವರಿಗೆ ತೀವ್ರ ವಿಷಕಾರಿಯಾಗಿದೆ. 10 ಎಂಎಲ್‌ವರೆಗೆ ಸೇವನೆ ಅಂಧತನಕ್ಕೆ ಕಾರಣವಾಗುತ್ತದೆ,30 ಎಂಎಲ್ ಅಥವಾ ಹೆಚ್ಚಿನ ಸೇವನೆ ಸಾಮಾನ್ಯವಾಗಿ ಮಾರಣಾಂತಿಕವಾಗುತ್ತದೆ.
ಕರುಣಾಪುರಂನಲ್ಲಿ ನಡೆದ ದುರಂತಕ್ಕೆ ಕಾರಣವಾಗಿದ್ದ ಕನ್ನುಕುಟ್ಟಿ ಮಾರಾಟ ಮಾಡಿದ್ದ ಮಿಥೈನಾಲ್ ಮಿಶ್ರಿತ ಸಾರಾಯಿ ಪುದುಚೇರಿಯ ಅಕ್ರಮ ಮದ್ಯ ತಯಾರಕರಿಂದ ಕುಡ್ಡಲೂರು ಮೂಲಕ ಪೂರೈಕೆಯಾಗಿತ್ತು ಎಂದು ಪೋಲಿಸ್ ಮೂಲಗಳು ತಿಳಿಸಿದವು. ಕನ್ನುಕುಟ್ಟಿಗೆ ವಿಷಪೂರಿತ ಮದ್ಯವನ್ನು ಮಾರಾಟ ಮಡಿದ್ದ ಚಿನ್ನದುರೈ ಎಂಬಾತನನ್ನು ಕುಡ್ಡಲೂರು ಜಿಲ್ಲೆಯ ಕಡಂಪುಲಿಯೂರಿನಲ್ಲಿ ಪೋಲಿಸರು ಬಂಧಿಸಿದ್ದಾರೆ.
ಪೋಲಿಸ್ ತನಿಖೆಯಲ್ಲಿ ಕನ್ನುಕುಟ್ಟಿ ಮತ್ತು ಚಿನ್ನದುರೈ ಅವರನ್ನು ಅಕ್ರಮ ಮದ್ಯ ಪೂರೈಕೆ ಜಾಲದಲ್ಲಿಯ ‘ಮಾರಾಟಗಾರರು’ ಎಂದು ಗುರುತಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಚಿನ್ನದುರೈ ಜೋಸೆಫ್ ಮತ್ತು ಮಾದೇಶ ಎನ್ನುವವರನ್ನು ಹೆಸರಿಸಿದ್ದು, ಇವರಿಬ್ಬರೂ ಮೆಥೈನಾಲ್‌ನ್ನು ಖರೀದಿಸಿ ತಮ್ಮ ಮಾಮೂಲು ಗಿರಾಕಿಗಳಿಗೆ ಮಾರಾಟ ಮಡುತ್ತಿದ್ದರು ಎಂದು ಶಂಕಿಸಲಾಗಿದೆ.
ಕನ್ನುಕುಟ್ಟಿ ಕಳೆದ 25 ವರ್ಷಗಳಿಂದಲೂ ಅಕ್ರಮ ಮದ್ಯ ಮಾರಾಟ ದಂಧೆಯನ್ನು ನಡೆಸುತ್ತಿದ್ದ. ಪೋಲಿಸರು ಮತ್ತು ಸ್ಥಳೀಯ ಅಧಿಕಾರಿಗಳ ಬೆಂಬಲದೊಂದಿಗೆ ನಿರ್ಭಯವಾಗಿ ವ್ಯಾಪಾರ ಮಾಡುತ್ತಿದ್ದ. ಈತನ ವಿರುದ್ಧ ದೂರು ನೀಡಿದವರ ಫೋನ್ ನಂಬರ್‌ಗಳನ್ನು ಪೋಲಿಸರೇ ಈತನಿಗೆ ನೀಡುತ್ತಿದ್ದರು. ಟ್ರೂ ಕಾಲರ್ ಆ್ಯಪ್ ನೆರವಿನಿಂದ ದೂರುದಾರರನ್ನು ಪತ್ತೆ ಮಾಡುತ್ತಿದ್ದ ಕನ್ನುಕುಟ್ಟಿ ಅವರಿಗೆ ಬೆದರಿಕೆಯೊಡ್ಡುತ್ತಿದ್ದ ಎಂದು ಚಿನ್ನರಸು ತಿಳಿಸಿದರು.
ಅಕ್ರಮ ಮದ್ಯ ದುರಂತಕ್ಕೆ ಸಂಬಂಧಿಸಿದಂತೆ ಕನ್ನುಕುಟ್ಟಿಯ ಅಕ್ರಮ ದಂಧೆಗೆ ನೆರವಾಗುತ್ತಿದ್ದ ಆತನ ಪತ್ನಿ ವಿಜಯಾ ಮತ್ತು ಸೋದರ ದಾಮೋದರನ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಕನ್ನುಕುಟ್ಟಿ ಪ್ರತಿವಾರ ಒಂದು-ಒಂದೂವರೆ ಸಾವಿರ ರೂ.ಗಳ ಲಂಚವನ್ನು ಪೋಲಿಸ್ ಇನ್ಸ್‌ಪೆಕ್ಟರ್‌ಗೆ ನೀಡುತ್ತಿದ್ದ. ಪೋಲಿಸ್ ಸಿಬ್ಬಂದಿಗೆ ಹಣದ ಅಗತ್ಯವಿದ್ದಾಗ ಕನ್ನುಕುಟ್ಟಿಯ ಮನೆಗೇ ಬಂದು ತಮ್ಮ ಪಾಲನ್ನು ವಸೂಲು ಮಾಡಿಕೊಂಡು ಹೋಗುತ್ತಿದ್ದರು. ಪೋಲಿಸರು ತಿಂಗಳಿಗೊಮ್ಮೆ ಆತನ ಮನೆಗೆ ನೆಪಮಾತ್ರಕ್ಕೆ ದಾಳಿ ನಡೆಸುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಕನ್ನುಕುಟ್ಟಿ ತನ್ನ ಗ್ರಾಹಕರಿಗೆ ಮನೆ ಬಾಗಿಲಿಗೇ ಮದ್ಯವನ್ನು ಪೂರೈಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇತ್ತೀಚಿನ ದುರಂತ ಪರಿಸ್ಥಿತಿಯನ್ನು ಬದಲಿಸಿದೆ. ಕಾಲನಿಯ ನಿವಾಸಿಗಳು ತಮ್ಮ ಸುತ್ತ ಸಂಭವಿಸಿದ ಸಾವುಗಳನ್ನು ಕಣ್ಣಾರೆ ಕಂಡಿದ್ದರೆ,ಹಲವಾರು ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥನಾಗಿದ್ದಾರೆ. ಕನ್ನುಕುಟ್ಟಿ ವಿರುದ್ಧ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ.







