ಕೇರಳದಲ್ಲಿ ನಿಂತಿರುವ ಬ್ರಿಟಿಷ್ ಫೈಟರ್ ಜೆಟ್ ಎಫ್-35 ಅನ್ನೇ ಬಳಸಿಕೊಂಡು ಅಭಿಯಾನ ಆರಂಭಿಸಿದ ಪ್ರವಾಸೋದ್ಯಮ ಇಲಾಖೆ!
“ಕೇರಳದಿಂದ ನಾನು ತೆರಳಲು ಬಯಸುವುದಿಲ್ಲ” ಎಂಬ ವಿನೋದಮಯ ಸಂದೇಶ

PC : NDTV
ತಿರುವನಂತಪುರಂ: ಜೂನ್ 14ರಂದು ಪ್ರತಿಕೂಲ ಹವಾಮಾನದ ಕಾರಣಕ್ಕೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್ ನ ಎಫ್-35ಬಿ ಲೈಟನಿಂಗ್ II ಯುದ್ಧ ವಿಮಾನವು ಕೇರಳ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿರುವ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ಎಕ್ಸ್ ನಲ್ಲಿ ಪೋಸ್ಟೊಂದನ್ನು ಮಾಡಿರುವ ಕೇರಳ ಪ್ರವಾಸೋದ್ಯಮ ಇಲಾಖೆ, “ಕೇರಳ ನೀವು ಎಂದಿಗೂ ತೊರೆಯಲು ಬಯಸದ ಗಮ್ಯ ಸ್ಥಳವಾಗಿದೆ. ಧನ್ಯವಾದ ಫಾಕ್ಸಿ’ ಎಂಬ ವಿನೋದಮಯ ಸಂದೇಶವನ್ನು ಹಂಚಿಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಹಾಸ್ಯಮಯ ಚರ್ಚೆಗೆ ನಾಂದಿ ಹಾಡಿದೆ.
Kerala, the destination you'll never want to leave.
— Kerala Tourism (@KeralaTourism) July 2, 2025
Thank you, The Fauxy.#F35 #Trivandrum #KeralaTourism pic.twitter.com/3lei66a5T2
“ಕೇರಳ ಅದೆಂಥ ವಿಸ್ಮಯಕಾರಿ ಸ್ಥಳವೆಂದರೆ, ನನಗೆ ಇಲ್ಲಿಂದ ತೆರಳುವ ಬಯಕೆಯೇ ಇಲ್ಲ. ಖಂಡಿತ ಇದನ್ನು ನಾನು ಶಿಫಾರಸು ಮಾಡುತ್ತೇನೆ” ಎಂದು ಬ್ರಿಟಿಷ್ ಯುದ್ಧ ವಿಮಾನ ಶಿಫಾರಸು ಮಾಡುತ್ತಿರುವಂತೆ, ಅದರ ಚಿತ್ರದ ಕೆಳಗೆ ನಕಲಿ ವಿಮರ್ಶೆಯ ಅಡಿ ಬರಹವನ್ನು ಮುದ್ರಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ನಗೆಗಡಲಲ್ಲಿ ಮುಳುಗಿಸಿದೆ.
ಸುಮಾರು 110 ದಶಲಕ್ಷ ಡಾಲರ್ ಗೂ ಹೆಚ್ಚು ಮೌಲ್ಯದ ಲಾಕ್ ಹೀಡ್ ಮಾರ್ಟಿನ್ ಅಭಿವೃದ್ಧಿಪಡಿಸಿರುವ ಐದನೆ ತಲೆಮಾರಿನ ಎಫ್-35ಬಿ ಲೈಟನಿಂಗ್ II ಸೂಪರ್ ಸಾನಿಕ್ ಸ್ಟೀಲ್ತ್ ಯುದ್ಧ ವಿಮಾನವು ಭಾರತೀಯ ನೌಕಾಪಡೆಯೊಂದಿಗಿನ ಜಂಟಿ ಸಮರಾಭ್ಯಾಸದ ಭಾಗವಾಗಿ ಬ್ರಿಟನ್ ನ ಎಚ್ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಪರವಾಗಿ ಭಾಗವಹಿಸಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಅದರ ಮಾರ್ಗವನ್ನು ಕೇರಳಕ್ಕೆ ಬದಲಿಸಲಾಗಿತ್ತು. ವಿಮಾನಕ್ಕೆ ಇಂಧನವನ್ನು ಮರುಭರ್ತಿ ಮಾಡಿದ ನಂತರ, ಅದು ಟೇಕಾಫ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಗ, ನೆಲದ ಮೇಲೆಯೇ ಅದರಲ್ಲಿ ಯಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ಆ ವಿಮಾನವನ್ನು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಲ್ಕನೆ ಬೇಯಲ್ಲಿ ನಿಲುಗಡೆ ಮಾಡಲಾಗಿದೆ.







