ನಿರಾಳ ತಂದ ಜಿಎಸ್ಟಿ; ಆರೋಗ್ಯ, ಜೀವ ವಿಮೆಗೆ ಜಿಎಸ್ಟಿ ಇಲ್ಲ

PC : X.com
ಹೊಸದಿಲ್ಲಿ,ಸೆ.3: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ನಡೆದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಸಭೆಯು ತೆರಿಗೆ ಸ್ಲ್ಯಾಬ್ಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ ಎರಡೇ ಸ್ಲ್ಯಾಬ್ಗಳ ತೆರಿಗೆ ಅಸ್ತಿತ್ವದಲ್ಲಿರಲಿದೆ. ಅಲ್ಲದೆ ಜೀವವಿಮೆಗೆ ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ ಹಾಗೂ ಜೀವರಕ್ಷಕ ಔಷಧಿಗಳಿಗೂ ವಿನಾಯಿತಿ ನೀಡುವ ಮೂಲಕ ಜನಸಾಮಾನ್ಯರಿಗೆ ನಿರಾಳವನ್ನುಂಟು ಮಾಡಿದೆ.
ಎರಡು ದಿನಗಳ ಜಿಎಸ್ಟಿ ಮಂಡಳಿಯ 56ನೇ ಸಭೆ ಬುಧವಾರ ಬೆಳಗ್ಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಆರಂಭಗೊಂಡಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಎಲ್ಲಾ ವಿತ್ತ ಸಚಿವರು ಭಾಗವಹಿಸಿದ್ದಾರೆ.
ಪ್ರಸಕ್ತ ಶೇ.5, ಶೇ.12, ಶೇ.18 ಹಾಗೂ ಶೇ.28 ಹೀಗೆ ನಾಲ್ಕು ಹಂತಗಳ ಸ್ಲ್ಯಾಬ್ ಗಳಿದ್ದು, ಇನ್ನು ಮುಂದೆ ಶೇ.5 ಹಾಗೂ ಶೇ.18 ಹೀಗೆ ಎರಡೇ ಹಂತದ ಸ್ಲ್ಯಾಬ್ಗಳಿರುವುದು. ಬಹುತೇಕ ಜೀವನಾವಶ್ಯಕ ವಸ್ತುಗಳಿಗೆ ಶೇ.5ರ ಜಿಎಸ್ಟಿ ಸ್ಲ್ಯಾಬ್ಗೆ ಸೇರ್ಪಡೆಗೊಳಿಸಲಾಗಿದೆ. ಐಶಾರಾಮಿ ಕಾರುಗಳಂತಹ ವಿಲಾಸಿ ವಸ್ತುಗಳು ಹಾಗೂ ತಂಬಾಕು, ಮದ್ಯ ಮತ್ತಿತರ ಸಾಮಗ್ರಿಗಳನ್ನು ವಿಶೇಷ ಶೇ.40ರ ಸ್ಲ್ಯಾಬ್ಗೆ ಸೇರ್ಪಡೆಗೊಳಿಸಲಾಗಿದೆ.
ಜೀವವಿಮೆ, ಆರೋಗ್ಯ ವಿಮೆ ಪ್ರೀಮಿಯಂಗಳಿಗೆ ವಿನಾಯಿತಿ ನೀಡಲಾಗಿದೆ.
ಅಟೋಮೊಬೈಲ್ಗೆ ಉತ್ತೇಜನ
ಇಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ.5ರಲ್ಲಿಯೇ ಮುಂದುವರಿಯಲಿದೆ. ಆಟೊ ಮೊಬೈಲ್ ಬಿಡಿಭಾಗಗಳ ಮೇಲಿನ ಜಿಎಸ್ಟಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ.
ಹೇರ್ ಆಯಿಲ್, ಶಾಂಪೂ, ಸೋಪ್,ಡೇರಿ ಉತ್ಪನ್ನಗಳು ಹಾಗೂ ಸ್ನ್ಯಾಕ್ ಗಳು 5 ಶೇ. ಜಿಎಸ್ಟಿ ಸ್ಲ್ಯಾಬ್ನಡಿಗೆ ಬರಲಿವೆ. ರೈತರಿಗೂ ಸಿಹಿ ಸುದ್ದಿ ದೊರೆತಿದ್ದು ಶೇ.12ರಷ್ಟಿದ್ದ ಕೃಷಿ ಉಪಕರಣಗಳ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಜಿಎಸ್ಟಿಯಲ್ಲಿ ಬಂಪರ್ ಗಿಫ್ಟ್ ನೀಡಲಾಗಿದೆ. ನೋಟು ಪುಸ್ತಕಗಳು, ಮ್ಯಾಪ್ಗಳು, ಪೆನ್ಸಿಲ್ಗಳು, ಕ್ರೆಯಾನ್, ಶಾರ್ಪನರ್ ಸಹಿತ ವಿವಿಧ ಪಠ್ಯೋಪಕರಣಗಳ ಮೇಲಿನ ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ.
ಟಿವಿ, ವಾಶಿಂಗ್ ಮೆಶಿನ್, ತುಪ್ಪ, ಉಡುಪು, ಔಷಧಿ, ಪಾದರಕ್ಷೆಗಳು ಅಗ್ಗವಾಗಲಿದೆ.
ಟಿ.ವಿ., ವಾಶಿಂಗ್ ಮೆಶಿನ್ ಹಾಗೂ ರೆಫ್ರಿಜರೇಟರ್ನಂತಹ ಇಲೆಕ್ಟ್ರಾನಿಕ್ ಉಪಕರಣಗಳು ಕೂಡಾ ಅಗ್ಗವಾಗುವ ನಿರೀಕ್ಷೆಯಿದೆ. ಶೇ.28 ಜಿಎಸ್ಟಿ ವಿಧಿಸಲಾಗುತ್ತಿದ್ದ ಈ ಸಾಮಗ್ರಿಗಳ ತೆರಿಗೆಯನ್ನು ಶೇ.18ಕ್ಕೆ ಇಳಿಸಲಾಗಿದೆ.
ತುಪ್ಪ, ಬೀಜಗಳು, ಕುಡಿಯುವ ನೀರು, ನಮ್ ಕೀನ್, ಪಾದರಕ್ಷೆ, ಉಡುಪುಗಳು, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಶೇ.5ರ ತೆರಿಗೆ ಸ್ಲ್ಯಾಬ್ ಗೆ ಒಳಪಡಿಸಲಾಗಿದೆ. ಪೆನ್ಸಿಲ್, ಬೈಸಿಕಲ್, ಕೊಡೆ, ಹೇರ್ ಪಿನ್ ಸೇರಿದಂತೆ ಸಾಮಾನ್ಯವಾಗಿ ಬಳಕೆಯಾಗುವ ಹಲವು ವಸ್ತುಗಳು ಶೇ.5 ಸ್ಲ್ಯಾಬ್ ಗೆ ಸೇರ್ಪಡೆಗೊಳಿಸಲಾಗಿದೆ.
ಹಾನಿಕಾರಕ, ವಿಲಾಸಿ ಸರಕುಗಳಿಗೆ ಶೇ.40 ಜಿಎಸ್ಟಿ
‘ಹಾನಿಕಾರಕ, ವಿಲಾಸಿ ಸರಕು’ಗಳ ಪಟ್ಟಿಯಲ್ಲಿರುವ ತಂಬಾಕು, ಮದ್ಯ ಮತ್ತು ಐಶಾರಾಮಿ ಕಾರು ಸೇರಿದಂತೆ ಕೆಲವು ನಿರ್ದಿಷ್ಟ ವಸ್ತುಗಳ ಮೇಲಿನ ಜಿಎಸ್ಟಿ ಶೇ.28ರಿಂದ ಶೇ.40ಕ್ಕೆ ಏರಿಕೆಯಾಗಿದೆ. ಅವುಗಳ ಮೇಲೆ ಆರೋಗ್ಯ ಮೇಲ್ತೆರಿಗೆ ಇಲ್ಲವೇ ಇಂಧನ ಮೇಲ್ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಷ್ಟ ಪರಿಹಾರಕ್ಕೆ ಕರ್ನಾಟಕ ಸಹಿತ ಪ್ರತಿಪಕ್ಷ ಆಳ್ವಿಕೆಯ ರಾಜ್ಯಗಳ ಆಗ್ರಹ
ಹಿಮಾಚಲಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮಬಂಗಾಳ ಸೇರಿದಂತೆ ಪ್ರತಿಪಕ್ಷ ಆಳ್ವಿಕೆಯ ಎಂಟು ರಾಜ್ಯಗಳು ಜಿಎಸ್ಟಿ ಹೇರಿಕೆಯ ಆನಂತರ ರಾಜ್ಯಗಳ ಆದಾಯದಲ್ಲಿ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿವೆ. ಕರ್ನಾಟಕ, ಪಂಜಾಬ್ ಹಾಗೂ ಪಶ್ಚಿಮಬಂಗಾಳ ರಾಜ್ಯಗಳು ತಮಗೆ ಆಗಿರುವ ಅಂದಾಜು ನಷ್ಟವನ್ನು ಮಂಡಳಿಗೆ ನೀಡಿವೆ. ಆ ರಾಜ್ಯಗಳ ಅಹವಾಲನ್ನು ಮಂಡಳಿಯು ಆಲಿಸಿದೆ ಎನ್ನಲಾಗಿದೆ.
ಶೇ.12ರ ತೆರಿಗೆ ಸ್ಲ್ಯಾಬ್ ನಲ್ಲಿರುವ ಸರಕುಗಳು ಶೇ.5 ರ ಶ್ರೇಣಿಗೆ!
ಶೇ.12ರ ತೆರಿಗೆ ಸ್ಲ್ಯಾಬ್ನಲ್ಲಿರುವ ಎಲ್ಲಾ ಸರಕುಗಳನ್ನು ಶೇ.5ರ ಸ್ಲ್ಯಾಬ್ಗೆ ಒಳಪಡಿಸಲಾಗಿದೆ. ಅದೇ ರೀತಿ ಶೇ.28ರ ತೆರಿಗೆ ಸ್ಲ್ಯಾಬ್ನಲ್ಲಿರುವ ಶೇ.90ರಷ್ಟು ಸರಕುಗಳು ಶೇ.18ರ ಸ್ಲ್ಯಾಬ್ಗೆ ಸೇರ್ಪಡೆಗೊಳ್ಳಲಿದೆ.
ಅಟೊಮೊಬೈಲ್ ಜಿಎಸ್ಟಿ ಶೇ.18ಕ್ಕೆ ಇಳಿಕೆ
ಅಟೊಮೊಬೈಲ್ ಗಳಿಗೆ ಪ್ರಸಕ್ತ ಶೇ.28ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದ್ದು, ಜೊತೆಗೆ ಮೇಲ್ತೆರಿಗೆ ಕೂಡಾ ಇದೆ. ಆದರೆ ಈ ಸಲ ಸಾಧಾರಣ ಕಾರುಗಳ ಮೇಲಿನ ಜಿಎಸ್ಟಿಯನ್ನು ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ಸಣ್ಣ ಕಾರುಗಳು ಹಾಗೂ 350 ಸಿಸಿವರೆಗಿನ ಮೋಟರ್ ಬೈಕ್ಗಳು ಈ ಪರಿಷ್ಕರಣೆಯಿಂದಾಗಿ ಅಗ್ಗವಾಗಲಿವೆ.







