ಜಿಎಸ್ಟಿ ಕಡಿತ: ಹಬ್ಬದ ಸೀಸನ್ ನಲ್ಲಿ ಪ್ರತಿ ಎರಡು ಸೆಕೆಂಡ್ ಗೆ ಒಂದು ಕಾರು ಮಾರಾಟ!

ಸಾಂದರ್ಭಿಕ ಚಿತ್ರ PC: istock photo
ಚೆನ್ನೈ; ಜಿಎಸ್ಟಿ ದರ ಕಡಿತ ಮತ್ತು ಹಬ್ಬಗಳ ಭಾವನಾತ್ಮಕ ತುಡಿತದ ಕಾರಣದಿಂದ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳ ಮಾರಾಟ ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೇರಿದೆ.
ಸಣ್ಣ ಕಾರುಗಳು ಮತ್ತು ಕಾಂಪ್ಯಾಕ್ಟ್ ಎಸ್ಯುವಿಗಳ ತೆರಿಗೆ ದರವನ್ನು ಕಡಿತಗೊಳಿಸಿರುವುದು ಈ ವಾಹನಗಳ ಕೈಗೆಟುಕುವಿಕೆಯನ್ನು ವಿಸ್ತೃತಗೊಳಿಸಿದ್ದು, ಸಾಲ ವೆಚ್ಚ ಮತ್ತು ಬೆಲೆ ಏರಿಕೆ ಹೆಚ್ಚಳದಿಂದ ಕಂಗಾಲಾಗಿದ್ದ ಗ್ರಾಹಕರ ಆಸಕ್ತಿಯ ಪುನರುಜ್ಜೀವನಕ್ಕೆ ಕಾರಣವಾಗಿದೆ.
ಎಸ್ಬಿಐ ಸಂಶೋಧನೆಯ ಪ್ರಕಾರ 2025ರ ಸೆಪ್ಟೆಂಬರ್ ನಲ್ಲಿ ಮಾರಾಟವಾದ ಎಲ್ಲ ಕಾರುಗಳ ಪೈಕಿ ಶೇಕಡ 78ರಷ್ಟು ಕಾರುಗಳು 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳಾಗಿವೆ. ಇದು ಸಮೂಹ ಮಾರುಕಟ್ಟೆ ವರ್ಗದ ಬಲವನ್ನು ನವೀಕರಿಸಿದೆ. 5 ರಿಂದ 10 ಲಕ್ಷ ರೂಪಾಯಿ ಬೆಲೆಯ ವಾಹನಗಳು ಒಟ್ಟು ಮಾರಾಟದ ಶೇಕಡ 64ರಷ್ಟಿದ್ದು, 5ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು ಶೇಕಡ 14ರಷ್ಟು ಕೊಡುಗೆ ನೀಡಿವೆ. ಈ ಮೂಲಕ ಬಜೆಟ್ ಕಾರುಗಳು ಹಬ್ಬದ ಬೇಡಿಕೆಯ ಬೆನ್ನೆಲುಬು ಎನಿಸಿವೆ.
ದೀಪಾವಳಿ ಮತ್ತು ನವರಾತ್ರಿ ಸಂದರ್ಭದಲ್ಲಿ ವಾಹನೋದ್ಯಮ ಪ್ರತಿ ಎರಡು ಸೆಕೆಂಡ್ ಗಳಲ್ಲಿ ಒಂದು ಕಾರು ಮಾರಾಟ ಮಾಡಿದ್ದು, ಡೀಲರ್ ಗಳು ವಿತರಣೆಯ ಗಡುವಿಗೆ ಬದ್ಧರಾಗಲು ಹೆಣಗಾಡಬೇಕಾಯಿತು ಎಂದು ವಿವರಿಸಿದೆ.
ಜಿಎಸ್ಟಿ ಪುನರ್ರಚನೆಯಿಂದ ಸಣ್ಣ ಕಾರುಗಳು ಮತ್ತು ಕಾಂಪ್ಯಾಕ್ಟ್ ಎಸ್ಯುವಿಗಳ ಮೇಲಿನ ತೆರಿಗೆ ಹೊರೆ ಕಡಿಮೆಯಾದದ್ದು ಗ್ರಾಹಕರ ಆಸಕ್ತಿ ಹೆಚ್ಚಿಸಲು ಮುಖ್ಯ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. ತೆರಿಗೆ ಕಡಿತದಿಂದಾಗಿ ಶೋರೂಂ ಬೆಲೆಗಳು ಕಡಿಮೆಯಾಗಿದ್ದು, ಡೀಲರ್ಶಿಪ್ಗಳಿಗೆ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿದೆ.







