ಸಾಮೂಹಿಕ ರಾಜೀನಾಮೆ ವರದಿಗಳನ್ನು ತಳ್ಳಿಹಾಕಿದ ಗೈಡೆನ್ಸ್ ತಮಿಳುನಾಡು; ಆಂಧ್ರಕ್ಕೆ ಹೂಡಿಕೆ ಮಾಹಿತಿಯ ಸೋರಿಕೆ ಆರೋಪದ ಬೆನ್ನಲ್ಲೇ ಸ್ಪಷ್ಟನೆ

ನಟ ವಿಜಯ್ | Photo Credit : PTI
ಚೆನ್ನೈ: ತಮಿಳುನಾಡು ಸರ್ಕಾರದ ಹೂಡಿಕೆ ಉತ್ತೇಜನ ಸಂಸ್ಥೆಯಾದ ‘ಗೈಡೆನ್ಸ್ ತಮಿಳುನಾಡು’ (Guidance Tamil Nadu) ಸಂಸ್ಥೆಯಲ್ಲಿ ಸಾಮೂಹಿಕ ರಾಜೀನಾಮೆಗಳು ನಡೆದಿವೆ ಎಂಬ ಮಾಧ್ಯಮ ವರದಿಗಳನ್ನು ಸಂಸ್ಥೆ ತಳ್ಳಿಹಾಕಿದೆ. 2026ರ ಜುಲೈನಲ್ಲಿ ಯಾವುದೇ ಸಾಮೂಹಿಕ ರಾಜೀನಾಮೆ ನಡೆದಿಲ್ಲ. ಉದ್ಯೋಗಿಗಳು ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಸ್ಥೆಯ ಹಲವು ಹಿರಿಯ ಉದ್ಯೋಗಿಗಳು ನಿರ್ಗಮಿಸಿದ್ದಾರೆ ಎಂಬ ವರದಿಗಳು ವಿವಾದಕ್ಕೆ ಕಾರಣವಾಗಿದ್ದವು. ಸಂಸ್ಥೆಯಿಂದ ನಿರ್ಗಮಿಸಿದ ಕೆಲ ಉದ್ಯೋಗಿಗಳು ನೆರೆಯ ಆಂಧ್ರಪ್ರದೇಶದ ಆರ್ಥಿಕ ಅಭಿವೃದ್ಧಿ ಮಂಡಳಿಯಲ್ಲಿ (APEDB) ಉದ್ಯೋಗ ಪಡೆದಿರುವುದು ವರದಿಯಾಗಿತ್ತು. ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ ಕಂಪೆನಿಗಳ ಕುರಿತ ಗೌಪ್ಯ ಮಾಹಿತಿಯನ್ನು ಆಂಧ್ರಪ್ರದೇಶಕ್ಕೆ ಸೋರಿಕೆ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಗೈಡೆನ್ಸ್ ತಮಿಳುನಾಡು, ಉತ್ತಮ ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣ, ಸ್ಥಳಾಂತರ ಹಾಗೂ ಕುಟುಂಬದ ಕಾರಣಗಳಿಂದ ಉದ್ಯೋಗಿಗಳು ಸಂಸ್ಥೆಯನ್ನು ತೊರೆಯುವುದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ. ಸಂಸ್ಥೆಯನ್ನು ತೊರೆಯುವ ಉದ್ಯೋಗಿಗಳ ವೃತ್ತಿಪರ ನಿರ್ಧಾರಗಳನ್ನು ಗೌರವಿಸುವುದಾಗಿ ತಿಳಿಸಿದೆ.
ಆದರೆ, ಸಂಸ್ಥೆಯಿಂದ ಎಷ್ಟು ಮಂದಿ ಉದ್ಯೋಗಿಗಳು ನಿರ್ಗಮಿಸಿದ್ದಾರೆ ಅಥವಾ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬ ವಿವರಗಳನ್ನು ಸ್ಪಷ್ಟನೆಯಲ್ಲಿ ನೀಡಿಲ್ಲ. ಹೂಡಿಕೆ ಸಂಬಂಧಿತ ಗೌಪ್ಯ ಮಾಹಿತಿಯನ್ನು ಆಂಧ್ರಪ್ರದೇಶಕ್ಕೆ ರವಾನಿಸಲಾಗಿದೆ ಎಂಬ ಆರೋಪಗಳಿಗೂ ನೇರ ಉತ್ತರ ನೀಡಿಲ್ಲ.
ಈ ಬೆಳವಣಿಗೆಯ ಕುರಿತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಜಯ್ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೃತ್ತಿಪರರ ಮೇಲೆ ಅನುಮಾನ ಮೂಡಿಸುವ ಮೂಲಕ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.






