ಗುಜರಾತ್ | ನರೇಗಾ ಹಗರಣದ ಎರಡನೇ ಪ್ರಕರಣದಲ್ಲಿ ಸಚಿವ ಬಚ್ಚುಭಾಯಿ ಖಾಬಡ್ ಪುತ್ರ ಮತ್ತೆ ಬಂಧನ

ಬಲವಂತ ಖಾಬಡ್ , ಬಚ್ಚುಭಾಯಿ ಖಾಬಡ್ | PC : indianexpress.com
ದಾಹೋದ್ : ಗುಜರಾತಿನ ಸಹಾಯಕ ಪಂಚಾಯತ್ ಮತ್ತು ಕೃಷಿ ಸಚಿವ ಬಚ್ಚುಭಾಯಿ ಖಾಬಡ್ ಅವರ ಪುತ್ರ ಬಲವಂತ ಖಾಬಡ್ ರನ್ನು ರವಿವಾರ ನರೇಗಾ ಹಗರಣ ಎರಡನೇ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬಲವಂತ ಮತ್ತು ಅವರ ಸೋದರ ಕಿರಣ ಎಪ್ರಿಲ್ನಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ ಬಂಧಿತರಾಗಿ ಮೇ 29ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಕಿರಣರನ್ನು ಅದೇ ದಿನ ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಗಿತ್ತಾದರೆ,ಶನಿವಾರ ದಾಹೋದ್ ಪೋಲಿಸರು ಬಲವಂತ ವಿರುದ್ಧ ಹೊಸ ಎಫ್ಐಆರ್ ದಾಖಲಿಸಿದ ಬಳಿಕ ರವಿವಾರ ಅವರನ್ನು ಬಂಧಿಸಲಾಗಿದೆ ಎಂದು ಡಿಎಸ್ಪಿ ಜಗದೀಶಸಿನ್ಹ ಭಂಡಾರಿ ಸುದ್ದಿಗಾರರಿಗೆ ತಿಳಿಸಿದರು.
ಶನಿವಾರ ದಾಖಲಾಗಿರುವ ಎಫ್ಐಆರ್ ಪ್ರಕಾರ, ಬಲವಂತ ಒಡೆತನದ ಸಂಸ್ಥೆಯು 2022-23ರಲ್ಲಿ ದಾಹೋದ್ ಜಿಲ್ಲೆಯ ಧನಪುರ ತಾಲೂಕಿನ ಭಾನಪುರ ಗ್ರಾಮದಲ್ಲಿ ನರೇಗಾದಡಿ ತನಗೆ ವಹಿಸಲಾಗಿದ್ದ ಕಾಮಗಾರಿಯನ್ನು ಪೂರ್ಣಗೊಳಿಸದೆ ಸರಕಾರದಿಂದ 33.86 ಲಕ್ಷ ರೂ.ಗಳನ್ನು ಪಡೆದುಕೊಂಡಿತ್ತು ಎಂದು ಭಂಡಾರಿ ತಿಳಿಸಿದರು.
ಇದು ನರೇಗಾದಡಿ ಸಾಮಗ್ರಿಗಳನ್ನು ಪೂರೈಸುವ ಗುತ್ತಿಗೆಗಳನ್ನು ಪಡೆದುಕೊಂಡಿದ್ದ ವಿವಿಧ ಏಜೆನ್ಸಿಗಳು ಸಾಮಗ್ರಿಗಳನ್ನು ಪೂರೈಸದಿದ್ದರೂ ಅವುಗಳಿಗೆ ಹಣ ಪಾವತಿಸಲಾಗಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಬಳಿಕ ಎಪ್ರಿಲ್ನಿಂದೀಚಿಗೆ ಪೋಲಿಸರು ದಾಖಲಿಸಿಕೊಂಡಿರುವ ಮೂರನೇ ಎಫ್ಐಆರ್ ಆಗಿದೆ.
ಬಲವಂತರ ‘ಶ್ರೀ ರಾಜ್ ಕನಸ್ಟ್ರಕ್ಷನ್ ಕಂಪನಿ, ಪಿಪೆರೊ’ ಸರಕಾರಿ ನೌಕರರೊಂದಿಗೆ ಶಾಮೀಲಾಗಿ ಭಾನಪುರ ಗ್ರಾಮದಲ್ಲಿ ನರೇಗಾ ಯೋಜನೆಗೆ ಸಾಮಗ್ರಿಗಳನ್ನು ಪೂರೈಸದೆ 33.86 ಲಕ್ಷ ರೂ.ಗಳನ್ನು ಪಡೆದಿತ್ತು ಎಂದು ಶನಿವಾರ ದಾಖಲಾಗಿರುವ ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಎಪ್ರಿಲ್ನಲ್ಲಿ 71 ಕೋಟಿ ರೂ.ಗಳ ನರೇಗಾ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್ಐಆರ್ ದಾಖಲಾದ ಬಳಿಕ ಮೇ 16ರಂದು ಬಲವಂತ ಮತ್ತು ಕಿರಣರನ್ನು ವಂಚನೆ,ಫೋರ್ಜರಿ ಮತ್ತು ನಂಬಿಕೆ ದ್ರೋಹ ಆರೋಪಗಳಲ್ಲಿ ಬಂಧಿಸಲಾಗಿತ್ತು.
ಮೇ 29ರಂದು ದಾಖಲಾಗಿದ್ದ ಎರಡನೇ ಎಫ್ಐಆರ್ ಪ್ರಕಾರ,ನರೇಗಾದಡಿ ದಾಹೋದ್ನ ಲವಾರಿಯಾ ಗ್ರಾಮದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೂ ಕಿರಣ ಒಡೆತನದ ಸಂಸ್ಥೆ ಸೇರಿದಂತೆ ವಿವಿಧ ಏಜೆನ್ಸಿಗಳಿಗೆ 18.41 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು.







