Gujarat | ಪ್ರಧಾನಿ ಮೋದಿ ತವರು ರಾಜ್ಯದಲ್ಲಿ 2 ವರ್ಷಗಳಲ್ಲಿ 75 ಸರಕಾರಿಶಾಲೆಗಳು ಬಂದ್!

ಸಾಂದರ್ಭಿಕ ಚಿತ್ರ | Photo Credit : PTI
ಅಹ್ಮದಾಬಾದ್, ಮಾ.2: ಖಾಸಗಿ ಶಾಲೆಗಳು ವಿಧಿಸುತ್ತಿರುವ ದುಬಾರಿ ಶುಲ್ಕಗಳು ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಕಳೆದ ಎರಡು ವರ್ಷಗಳಲ್ಲಿ ಗುಜರಾತ್ ನಲ್ಲಿ 75 ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುಗಡೆಗೊಂಡಿರುವುದನ್ನು ರಾಜ್ಯ ಸರಕಾರ ಸೋಮವಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
ಅತ್ಯಂತ ಕ್ಷೀಣ ಸಂಖ್ಯೆಯಿಂದ ಹಿಡಿದು ಶೂನ್ಯಮಟ್ಟದವರೆಗೆ ಶಾಲಾ ದಾಖಲಾತಿಯಿರುವುದೇ ಶಾಲೆಗಳ ಮುಚ್ಚುಗಡೆಗೆ ಕಾರಣವೆಂದು ರಾಜ್ಯಸರಕಾರವು ಲಿಖಿತ ಉತ್ತರದಲ್ಲಿ ತಿಳಿಸಿದೆ.
ಅಲ್ಲದೆ ಶಿಥಿಲವಾದ ತರಗತಿಕೊಠಡಿಗಳನ್ನು ಧ್ವಂಸಗೊಳಿಸಲಾಗುತ್ತಿದ್ದು, ನೂತನ ಕಟ್ಟಡಗಳ ಕಾಮಗಾರಿಯ ಕಾರಣ ರಾಜ್ಯದ 2674 ಸರಕಾರಿ ಶಾಲೆಗಳು ಪಾಳಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೂಡಾ ಸರಕಾರವು ಬಹಿರಂಗಪಡಿಸಿದೆ.
2023-24 ಹಾಗೂ 2024-25ರ ನಡುವೆ ಗುಜರಾತ್ನ 15 ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆಗಳನ್ನು ತೊರೆಯು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಕೂಡಾ ಶಾಲೆಗಳ ಮುಚ್ಚುಗಡೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.





